ಬಂಟ್ವಾಳ : ತಾಲೂಕಿನ ಕಾವಳಪಡೂರು ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಪರ್ವತ ಕ್ಷೇತ್ರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣಗೊಂಡಿರುವ ಕಾರಿಂಜ ಅತಿಥಿಗೃಹ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ.
ನಿಸರ್ಗ ಸೌಂದರ್ಯದ ಮಧ್ಯೆ ಭಕ್ತಾದಿಗಳೊಂದಿಗೆ ಪ್ರವಾಸಿಗರನ್ನು ಸೆಳೆಯುವ ತಾಣವಾಗಿರುವ ಕಾರಿಂಜ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಪ್ರವಾಸೋದ್ಯಮ ತಾಣವಾಗಿ ರೂಪಿಸುವ ಪ್ರಯತ್ನ ಇಲ್ಲಿ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಪ್ರವಾಸಿಗರು ಹಾಗೂ ದೇವಳಕ್ಕೆ ಬರುವ ಭಕ್ತರು ಉಳಿದುಕೊಳ್ಳುವ ನಿಟ್ಟಿನಲ್ಲಿ 1997ರಲ್ಲಿಯೇ ಅತಿಥಿಗೃಹ ನಿರ್ಮಿಸಲಾಗಿದೆ.
ವಿಶಾಲವಾದ ಕೆರೆಯ ಪಕ್ಕ ಕೊಡ್ಯಮಲೆ ಅರಣ್ಯ ತಪ್ಪಲಿನಲ್ಲಿರುವ ಕಾರಿಂಜ ಅತಿಥಿಗೃಹ ಪ್ರಸ್ತುತ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಮೂರ್ನಾಲ್ಕು ಕೊಠಡಿಗಳ ಬಾಗಿಲು ತೆರೆದು ಕೊಂಡಿದ್ದು, ಅಲ್ಲಲ್ಲಿ ಮದ್ಯದ ಬಾಟಲಿಗಳು ಬಿದ್ದಿವೆ, ಸ್ವಚ್ಛತೆ ಮರೀಚಿಕೆಯಾಗಿದೆ.
ಕಬ್ಬಿಣದ ಬೆಂಚುಗಳು ತಲೆಕೆಳಗಾಗಿ ಬಿದ್ದುಕೊಂಡಿವೆ. ಅತಿಥಿಗೃಹದ ಪಕ್ಕ ಇರುವ ಸಾರ್ವಜನಿಕ ಶೌಚಾಲಯ ಪೊದೆಗಳ ಮಧ್ಯೆ ಮರೆಯಾಗಿದ್ದು, ಜನರು ಶೌಚಾಲಯದ ಒಳ ಹೋಗಲು ಭಯ ಪಡುವಂತಿದೆ.
ಆಟಿ ಅಮಾವಾಸ್ಯೆ, ವಾರ್ಷಿಕ ಜಾತ್ರೆಗಳ ಸಂದರ್ಭ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ. ಸಾರ್ವಜನಿಕ ಶೌಚಾಲಯ ಬಳಕೆಗೆ ಸಿಗದೆ ಜನರು ಬಯಲು ಶೌಚಾಲಯವನ್ನೇ ಅವಲಂಬಿಸಬೇಕಾಗುತ್ತದೆ.