ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ನಿಲ್ದಾಣಕ್ಕೆ ಸೆಪ್ಟೆಂಬರ್ 23 ಮತ್ತು 24 ರಂದು ಬಂದ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಚಿನ್ನ ಸಾಗಾಟ ಮಾಡಲಾಗುತ್ತಿತ್ತು. ವಿವಿಧ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದ ಐವರು ಪ್ರಯಾಣಿಕರಿಂದ 24 ಕ್ಯಾರೆಟ್ ಪರಿಶುದ್ಧತೆಯ 775 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ರೂ 46,52,270 ಎಂದು ಅಂದಾಜಿಸಲಾಗಿದೆ.
ದುಬೈನಿಂದ ಮಂಗಳೂರಿಗೆ ವಿವಿಧ ವಿಮಾನಗಳಲ್ಲಿ ಆಗಮಿಸುತ್ತಿದ್ದ ಐವರು ಪ್ರಯಾಣಿಕರನ್ನು ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಸ್ಕ್ಯಾನಿಂಗ್, ಟ್ರಾಲಿ ಬ್ಯಾಗ್‌ಗಳನ್ನು ತೆರೆದು ಪರೀಕ್ಷಿಸಿದಾಗ ಅಕ್ರಮ ಬೆಳಗಿಕೆ ಬಂದಿದೆ.
ಚಿನ್ನದ ವಸ್ತುಗಳನ್ನು ಪ್ರಯಾಣಿಕರು ಅವರು ಧರಿಸಿರುವ ಒಳ ಉಡುಪುಗಳ ನಡುವೆ ಪೇಸ್ಟ್ ರೂಪದಲ್ಲಿ ಏರ್ ಪಾಡ್‌ಗಳ ಮೂಲಕ ತಮ್ಮ ಟ್ರಾಲಿ ಬ್ಯಾಗ್‌ಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದರು. ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.
ರೈಲಿನಿಂದ ಬಿದ್ದ ಮಹಿಳೆ, ಸಂಬಂಧಿ ರಕ್ಷಣೆ: ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ಬಿದ್ದ ಮಹಿಳೆ ಮತ್ತು ಆಕೆಯ ಸಂಬಂಧಿಯನ್ನು ರೈಲ್ವೆ ರಕ್ಷಣಾ ದಳದವರು ರಕ್ಷಣೆ ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮಂಗಳೂರು ಸೆಂಟ್ರಲ್-ಚೆನ್ನೈ ಸೆಂಟ್ರಲ್ -ಚೆನ್ನೈ ಎಕ್ಸ್‌ಪ್ರೆಸ್ ರೈಲು ಪ್ಲಾಟ್‌ಫಾರಂ 1ರಿಂದ ಹೊರಡುತ್ತಿದ್ದಾಗ ಕೊಯಮತ್ತೂರಿನ ಸೋಫಿಯಾ ರೈಲು ಹತ್ತಲು ಯತ್ನಿಸಿದರು. ಆದರೆ ರೈಲು ಹತ್ತಲು ಸಾಧ್ಯವಾಗದೆ ಅವರು ಕೆಳಕ್ಕೆ ಬಿದ್ದರು. ಅಲ್ಲಿಯೇ ಇದ್ದ ಆಕೆಯ ಸಂಬಂಧಿ ಆಕೆಯನ್ನು ರಕ್ಷಿಸಲು ಮುಂದಾದರು. ಆದರೆ ಇಬ್ಬರೂ ನಿಯಂತ್ರಣ ಕಳೆದುಕೊಂಡು ಬಿದ್ದರು. ಹತ್ತಿರದಲ್ಲಿದ್ದ ಆರ್‌ಪಿಎಫ್ ಸಿಬ್ಬಂದಿ ಬಾಬುರಾಜನ್ ಅವರು ಕೂಡಲೇ ಅವರಿಬ್ಬರನ್ನು ಎಳೆದು ರಕ್ಷಣೆ ಮಾಡಿದ್ದಾರೆ. ಮಹಿಳೆಯ ಎರಡು ಮೊಣಕಾಲುಗಳಿಗೂ ಗಾಯವಾಗಿದ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.
ಸಿಟಿ ಬಸ್ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಗಲಾಟೆ: ಕ್ಷುಲ್ಲಕ ವಿಚಾರದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬಸ್ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಸಣ್ಣ ಜಗಳ ನಡೆದಿದೆ. ನಗರದ ಸ್ಟೇಟ್ ಬ್ಯಾಂಕ್ನಿಂದ ಕಣ್ಣೂರು ಕಡೆಗೆ ಹೋಗುತ್ತಿದ್ದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಸಂಜೆ 6:15ರ ಸುಮಾರಿಗೆ ಕಣ್ಣೂರು ಚೆಕ್ ಪೋಸ್ಟ್‌ನಿಂದ ಸ್ವಲ್ಪ ಹಿಂದೆ ಬಸ್ ನಿಲ್ಲಿಸುವಂತೆ ಕಂಡಕ್ಟರ್‌ಗೆ ಕೇಳಿದ್ದರು. ಆದರೆ, ಕಂಡಕ್ಟರ್ ಮುಂದಿನ ನಿಲ್ದಾಣದಲ್ಲಿ ನಿಲ್ಲಿಸುವುದಾಗಿ ಹೇಳಿದ್ದಾರೆ. ಇದರಿಂದಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಮತ್ತು ಹಲ್ಲೆ ನಡೆದಿದೆ. ಇದರಿಂದ ಸಣ್ಣಪುಟ್ಟ ಗಾಯಗಳಾಗಿವೆ.
ಬಸ್ ಚಾಲಕ ನಜೀರ್ ಹಾಗೂ ಅಲ್ಲಿದ್ದ ಸಾರ್ವಜನಿಕರು ಮಧ್ಯ ಪ್ರವೇಶಿಸಿ ಎಲ್ಲರನ್ನು ಅಲ್ಲಿಂದ ಚದುರಿಸಿದ್ದಾರೆ. ಕಂಡಕ್ಟರ್ ಮತ್ತು ಪ್ರಯಾಣಿಕರಿಬ್ಬರ ಪ್ರತ್ಯೇಕ ದೂರಿನ ಆಧಾರದ ಮೇಲೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳು ನಡುವೆ ಗಲಾಟೆ