ಮಂಗಳೂರು: ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ವ್ಯಕ್ತಿಯೊಬ್ಬನನ್ನು ವಾಹನಕ್ಕೆ ಕಟ್ಟಿ ಥಳಿಸಿದ ಘಟನೆ ನಡೆದಿದೆ.
ಜೋಕಟ್ಟೆ ನಿವಾಸಿ ಅಬ್ದುಲ್ ರೆಹಮಾನ್ (34) ಥಳಿತಕ್ಕೊಳಗಾದ ವ್ಯಕ್ತಿ. ಜೋಕಟ್ಟೆಯಿಂದ ಕುದ್ರೋಳಿಯ ಕಸಾಯಿಖಾನೆಗೆ ನಾಲ್ಕು ಮರಿ ಕೋಣಗಳನ್ನು ಅಬ್ದುಲ್ ರೆಹಮಾನ್ ಸಾಗಾಟ ಮಾಡುತ್ತಿರುವುದಾಗಿ ಬಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ಲಭ್ಯವಾಗಿದೆ. ಈತ ಜಾನುವಾರು ತುಂಬಿದ ವಾಹನದೊಂದಿಗೆ ನಗರದ ಉರ್ವದಲ್ಲಿನ ಇನ್ಫೋಸಿಸ್ ಸಮೀಪ ಬರುತ್ತಿರುವಾಗ ಬಜರಂಗದಳದ ಕಾರ್ಯಕರ್ತರು ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಈ ಸಂದರ್ಭ ಆತನನ್ನು ವಾಹನಕ್ಕೆ ಕಟ್ಟಿ ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಅಬ್ದುಲ್ ರೆಹಮಾನ್ ಸಹಿತ ಎಮ್ಮೆಯ ಕರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ಹಾಗೂ ಕೋವಿಡ್ ತಪಾಸಣೆಗೆ ಒಳಪಡಿಸಿದ್ದಾರೆ. ಬಳಿಕ ನ್ಯಾಯಾಧೀಶರ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.