ಮಂಗಳೂರು: ಭಾರತ ಸಂಪೂರ್ಣ ಲಾಕ್ ಡೌನ್ ಆಗಿರುವ ಕಾರಣ ಹಾಸ್ಟೆಲ್ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ಕಚೇರಿಗೆ ಟ್ವೀಟ್ ಮಾಡಿ ಮೊಟ್ಟೆ, ಮ್ಯಾಗಿಗೆ ಬೇಡಿಕೆ ಇಟ್ಟಿದ್ದಾಳೆ. ಬೇಡಿಕೆ ಇಟ್ಟ ಅರ್ಧ ಗಂಟೆಯಲ್ಲಿ ಆಕೆಯ ಹಾಸ್ಟೆಲ್ ಬಾಗಿಲಿಗೆ ಮೊಟ್ಟೆ ಹಾಗೂ ಮ್ಯಾಗಿ ತಲುಪಿದ ವಿಚಿತ್ರ ಆದರೂ ಸತ್ಯ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಹಾಸ್ಟೆಲೊಂದರಲ್ಲಿ ಇರುವ ಉತ್ತರ ಪ್ರದೇಶ ಮೂಲದ ಸೌಮ್ಯಾ ಸಿಂಗ್ ಎಂಬ ವಿದ್ಯಾರ್ಥಿನಿ ಮೊಟ್ಟೆ ಮತ್ತು ಮ್ಯಾಗಿಗೆ ಬೇಡಿಕೆ ಇಟ್ಟು ಟ್ವೀಟ್ ಮಾಡಿದ್ದಳು. ಆಕೆ ಮಾರ್ಚ್ 31ರಂದು ತಾನು ಹಾಸ್ಟೆಲ್ನಲ್ಲಿದ್ದು, ತಿನ್ನಲೂ ಏನೂ ಇಲ್ಲ ಎಂದು ಪ್ರಧಾನಿ ಕಚೇರಿಗೆ ಟ್ವೀಟ್ ಮಾಡಿದ್ದಾಳೆ. ಇದನ್ನು ಗಮನಿಸಿದ ರಾಜ್ಯ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್ ಸಿಂಗ್ ತಕ್ಷಣ ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಅವರ ವಾರ್ ರೂಂಗೆ ಮಾಹಿತಿ ನೀಡಿದ್ದಾರೆ.
ವಾರ್ ರೂಮ್ ಮೇಲ್ವಿಚಾರಕ ಪ್ರದ್ಯುಮ್ನ ರಾವ್ ಟ್ವೀಟ್ನಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಏನು ಬೇಕು ಎಂದು ಕೇಳಿದ್ದಾರೆ. ಆದರೆ ಆಕೆಯ ಒಂದು ಡಜನ್ ಮೊಟ್ಟೆ ಹಾಗೂ ಆರು ಪ್ಯಾಕೇಟ್ ಮ್ಯಾಗಿ ಬೇಕು ಎಂಬ ಬೇಡಿಕೆಯನ್ನು ಕಂಡು ಒಂದು ಸಲ ವಿಚಲಿತರಾದರೂ, ಆಕೆಯ ಬೇಡಿಕೆಯನ್ನು ಕೇವಲ ಅರ್ಧ ಗಂಟೆಯೊಳಗೆ ಉಚಿತವಾಗಿ ಪೂರೈಸಿದ್ದಾರೆ.