ಬಂಟ್ವಾಳ (ದಕ್ಷಿಣ ಕನ್ನಡ): ಪಾಣೆಮಂಗಳೂರು ಸೇತುವೆಯ ಸಮೀಪದ ನೇತ್ರಾವತಿ ನದಿಯಲ್ಲಿ ಹಿಂದು ಸಂಘಟನೆ ಮುಖಂಡರೊಬ್ಬರ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಬಂಟ್ವಾಳ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವ್ಯಕ್ತಿಯನ್ನು ಸಜಿಪನಡು ಸಾನದಮನೆ ನಿವಾಸಿ, ಹಿಂದುಪರ ಸಂಘಟನೆಗಳ ಮುಖಂಡ ರಾಜೇಶ್ ಸುವರ್ಣ ಎಂದು ಗುರುತಿಸಲಾಗಿದೆ. ಸೇತುವೆ ಬಳಿ ರಾತ್ರಿ ದ್ವಿಚಕ್ರ ವಾಹನವೊಂದು ತಡೆಗೊಡೆಗೆ ಡಿಕ್ಕಿ ಹೊಡೆದ ಸ್ಥಿತಿಯಲ್ಲಿತ್ತು. ಈ ರಸ್ತೆಯಲ್ಲಿ ಹಾದು ಹೋಗುವವರು ಅನುಮಾನಗೊಂಡು ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು.
ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿ ನದಿಗೆ ಬಿದ್ದಿರಬಹುದೆಂದು ಅನುಮಾನಗೊಂಡು ಪೊಲೀಸರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ, ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಯಿತು. ಬೆಳಗ್ಗೆಯವರೆಗೂ ಶೋಧ ನಡೆಸಿದ್ದ ಅಗ್ನಿಶಾಮಕ ಸಿಬ್ಬಂದಿಗೆ ನದಿಯಲ್ಲಿ ವ್ಯಕ್ತಿಯ ದೊರೆತಿದೆ. ಪೊಲೀಸರು ವ್ಯಕ್ತಿಯ ಗುರುತು ಪತ್ತೆಗಾಗಿ ತನಿಖೆ ಕೈಗೊಂಡು ವಾಹನ ಸಂಖ್ಯೆ ಮತ್ತು ಇತರ ಮಾಹಿತಿ ಆಧರಿಸಿ ಸಾವನ್ನಪ್ಪಿರುವ ಯುವಕನನ್ನು ರಾಜೇಶ್ ಸುವರ್ಣ ಎಂದು ಗುರುತಿಸಿದ್ದಾರೆ. ರಾಜೇಶ್ ಸುವರ್ಣ ಓರ್ವ ಹಿಂದೂ ಸಂಘಟನೆ ಮುಖಂಡ ಎಂಬುದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಧರ್ಮಕ್ಕೆ ವಾಪಸ್ ಆದ 80 ಮಂದಿ..!
ರಾಜೇಶ್ ಸುವರ್ಣ ಅವಿವಾಹಿತರು. ಕೆಲವು ವರ್ಷಗಳಿಂದ ಹಿಂದುಪರ ಸಂಘಟನೆಗಳಾದ ವಿಶ್ವ ಹಿಂದು ಪರಿಷತ್, ಬಜರಂಗದಳಗಳಲ್ಲಿ ಗುರುತಿಸಿಕೊಂಡಿದ್ದರು. ಕಲ್ಲಡ್ಕ ವಲಯದ ಬಜರಂಗದಳದ ಮುಖಂಡರೂ ಆಗಿದ್ದರು. ನದಿಯಲ್ಲಿ ಮೃತದೇಹ ದೊರೆತ ನಂತರ ಪೊಲೀಸರು ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಿದ್ದಾರೆ. ರಾಜೇಶ್ ಸುವರ್ಣ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸಂತ್ರಸ್ತ ವ್ಯಕ್ತಿಯ ಪೋಷಕರು ಮತ್ತು ಸಂಬಂಧಿಗಳು ಆಸ್ಪತ್ರೆಗೆ ಆಗಮಿಸಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ಪೊಲೀಸರು ನಿರ್ಧರಿಸಿದ್ಗಾರೆ.
ರಾಜೇಶ್ ಸುವರ್ಣ ಸಾವು ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಓರ್ವ ಹಿಂದೂ ಮುಖಂಡರಾಗಿದ್ದು, ಬುಧವಾರ ರಾತ್ರಿ ಪಾಣೆಮಂಗಳೂರು ಸೇತುವೆ ಬಳಿ ವಾಹನದಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಮಗುಚಿ ನದಿಗೆ ಬಿದ್ದಿದ್ದಾರೆಯೇ, ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಯಾರಾದರೂ ಡಿಕ್ಕಿ ಹೊಡೆದು ಅವರನ್ನು ನದಿಗೆ ತಳ್ಳಿ ಪರಾರಿಯಾಗಿದ್ದಾರೆಯೇ ಎಂಬೆಲ್ಲ ಅನುಮಾನಗಳು ಸ್ಥಳೀಯರಲ್ಲಿ ಹುಟ್ಟಿಕೊಂಡಿವೆ. ಈ ಆಯಾಗಳಲ್ಲೂ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸಾವಿಗೆ ನಿಖರ ಕಾರಣ ಗುರುತಿಸುವ ಕಾರ್ಯ ನಡೆಯುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಶೀಘ್ರ ಸ್ಪಷ್ಟ ಮಾಹಿತಿ ದೊರಕಲಿದೆ ಎಂಬ ವಿಶ್ವಾಸವನ್ನು ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಲವ್ ಜಿಹಾದ್ ವಿರುದ್ಧ ವಿಶ್ವ ಹಿಂದೂ ಪರಿಷತ್ ರಾಷ್ಟ್ರವ್ಯಾಪಿ ಅಭಿಯಾನ