ಬೆಳ್ತಂಗಡಿ: ತಾಲೂಕಿನಲ್ಲಿ ಗುರುವಾರ ಭಾರಿ ಮಳೆಯಾಗಿದ್ದು ವಿವಿಧೆಡೆ ಅನಾಹುತ ಸಂಭವಿಸಿದೆ.
ಗಾಳಿಸಹಿತ ಧಾರಾಕಾರ ಮಳೆಗೆ ಅಲ್ಲಲ್ಲಿ ಅಡಕೆ ಹಾಗೂ ರಬ್ಬರ್ ಗಿಡಗಳು ನೆಲಕ್ಕುರುಳಿವೆ. ಮಂಗಳೂರು ವಿಲ್ಲುಪುರಂನ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟಿನಲ್ಲೂ ಭೂಕುಸಿತಗಳು ಉಂಟಾಗಿದ್ದು ತಕ್ಷಣ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಮಲವಂತಿಗೆ ಗ್ರಾಮದ ಕುರುಬರ ಗುಡ್ಡೆ ವಾಸದಲ್ಲಿ ಮನೆ ಕುಸಿದು ಹಾನಿಯಾಗಿದೆ. ಮಿತ್ತಬಾಗಿಲು ಸಮೀಪದ ಕಿಲ್ಲೂರು ಎಂಬಲ್ಲಿ ಅಂಗನವಾಡಿ ಶಾಲೆಯ ಪಕ್ಕದ ಗುಡ್ಡ ಕುಸಿತಗೊಂಡಿದೆ.
ಮುಂಡಾಜೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಭಿಡೆ ಕ್ರಾಸ್ ಬಳಿ ಮನೆಯೊಂದರ ಹಿಂಭಾಗದಲ್ಲಿ ಗುಡ್ಡ ಕುಸಿದಿದ್ದು, ಸ್ಥಳಿಯರು ಮಣ್ಣು ತೆರವುಗೊಳಿಸಿದ್ದಾರೆ. ಲಾಯಿಲ ಗ್ರಾಮದ ಅಗಳಿ ಎಂಬಲ್ಲಿ ದೊಡ್ಡ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಜಡಿಮಳೆಯಿಂದ ಬಜಿರೆ ಗ್ರಾಮದ ರತ್ನ ಎಂಬವರ ಮನೆ ಕುಸಿದಿದೆ. ಕಳಿಯ ಗ್ರಾಮದ ಸ್ಟ್ಯಾನಿ ಡಿ ಸೋಜ ಎಂಬವರ ತೋಟಕ್ಕೆ ಗುಡ್ಡದ ಮಣ್ಣು ಕುಸಿದು ಬಿದ್ದು ಅಡಿಕೆ ಮರಗಳಿಗೆ ಹಾನಿಯಾಗಿದೆ.
ತೋಟತ್ತಾಡಿಯ ಸಿಲ್ವಿ ವಿಜು ಅವರ ಮನೆಯು ಮಳೆಗೆ ಬಿದ್ದು ಸಂಪೂರ್ಣ ಹಾನಿ ಸಂಭವಿಸಿದೆ. ಪಡಂಗಡಿ ಎಂಬಲ್ಲಿ ಹಾಜಿರಾ ಅವರ ಮನೆಯ ಒಂದು ಭಾಗ ಕುಸಿದು ಬಿದ್ದಿದ್ದು, ತಾಲೂಕಿನ ವಿವಿಧ ಕಡೆಗಳಲ್ಲಿ ಮರಗಳು ಬಿದ್ದು ಹಲವೆಡೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಇದನ್ನೂ ಓದಿ: ರಾಜ್ಯದ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಹೀಗಿದೆ..