ಪುತ್ತೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತವಾಗಿ ಪರಿವರ್ತನೆಗೊಂಡಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಮೇ 5 ರಂದು ಸಂಜೆ ಪುತ್ತೂರಿನಲ್ಲಿ ಗಾಳಿ ಮಳೆಯಿಂದಾಗಿ ಬಹುತೇಕ ಕಡೆ ಮನೆ, ರಸ್ತೆ, ಎಪಿಎಂಸಿ ಗೋದಾಮುಗಳಿಗೆ ಹಾನಿಯಾಗಿದೆ.
ಮರಗಳು ಉರುಳಿ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಭಾರಿ ಹಾನಿಯಾಗಿದೆ. ಬಂಗಾಳ ಕೊಲ್ಲಿಯ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳಿದ್ದು, ಈ ಚಂಡಮಾರುತಕ್ಕೆ ಅಂಫಾನ್ ಎಂದು ಹೆಸರಿಡಲಾಗಿದೆ.
ವಾಯುಭಾರ ಕುಸಿತದಿಂದ ಬಂಗಾಳ ಕೊಲ್ಲಿಯ ಆಗ್ನೇಯ ಭಾಗ, ಅಂಡಮಾನ್, ನಿಕೋಬಾರ್ ದ್ವೀಪ ಹಾಗೂ ಭಾರತದ ಪಶ್ಚಿಮ ಕರಾವಳಿಯಲ್ಲಿ ಭಾರಿ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿತ್ತು. ಈ ಹಿನ್ನಲೆ ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪುತ್ತೂರು, ಸುಳ್ಯ, ಕಡಬ ತಾಲೂಕಿನ ವಿವಿಧೆಡೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಬಿರುಗಾಳಿ ಸಹಿತ ಮಳೆಯಾಗಿದೆ.
ಗಾಳಿ ಮಳೆ ಬರುವ ಸಂದರ್ಭ ಅಡುಗೆ ಅನಿಲ ಸಾಗಣೆ ಲಾರಿಯ ಮೇಲೆ ಬೆದ್ರಾಳ ಸಮೀಪ ಮರವೊಂದು ಮುರಿದು ಬಿದ್ದಿದೆ. ಘಟನೆಯಿಂದ ಚಾಲಕ ಅಪಾಯದಿಂದ ಪಾರಾಗಿದ್ದು, ಲಾರಿಗೆ ಹಾನಿಯಾಗಿದ್ದು, ಮರ ಬಿದ್ದ ರಭಸಕ್ಕೆ ಬೆದ್ರಾಳ ರಸ್ತೆಯುದ್ದಕ್ಕೂ ಸುಮಾರು ೧೫ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.