ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯ ನದಿ, ತೊರೆಗಳು ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಮಳೆ, ಗಾಳಿಗೆ ಈವರೆಗೆ 50ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. 300ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. 10ಕ್ಕೂ ಅಧಿಕ ಟ್ರಾನ್ಸ್ಫಾರ್ಮರ್ಗಳು ಕೆಟ್ಟು ಹೋಗಿವೆ. ತೋಟಗಾರಿಕಾ ಬೆಳೆಗಳು ನೆಲಕಚ್ಚಿದ್ದರೆ, ನದಿಗಳ ಪ್ರವಾಹದಿಂದ ಅಲ್ಲಲ್ಲಿ ಭತ್ತದ ಬೆಳೆ ಪ್ರವಾಹಕ್ಕೆ ಕೊಚ್ಚಿಹೋಗಿದೆ.
ಜಿಲ್ಲಾಡಳಿತದಿಂದ ತೆರೆದಿರುವ 5 ಕಾಳಜಿ ಕೇಂದ್ರಗಳಿಗೆ 35ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಎಡೆಬಿಡದೆ ಸುರಿಯುತ್ತಿರುವ ಜೋರು ಮಳೆಯಿಂದಾಗಿ ಕುಮಾರಧಾರಾ ನದಿ ನೀರಿನ ಮಟ್ಟ ಏರುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ನದಿ ನೀರಿಗೆ ತೀರ್ಥಸ್ನಾನಕ್ಕೆ ಹೋಗದಂತೆ ದೇವಾಲಯದ ಭಕ್ತರಿಗೆ ಸೂಚನೆಯನ್ನು ನೀಡಲಾಗಿದೆ. ಭಕ್ತರು ಸ್ನಾನಘಟ್ಟಕ್ಕೆ ಇಳಿಯದಂತೆ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ಸ್ನಾನ ಘಟ್ಟದ ಬಳಿ ಕಾವಲು ಕಾಯುತ್ತಿದ್ದಾರೆ.
ರಸ್ತೆಗಳು ಜಲಾವೃತ: ಕುಮಾರಧಾರಾ ಹಾಗೂ ಉಪನದಿ ದರ್ಪಣ ತೀರ್ಥ ಮೈದುಂಬಿ ಹರಿಯುತ್ತಿದ್ದು, ಕುಮಾರಧಾರಾ ಸಮೀಪದ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿ ರಸ್ತೆ ಪ್ರವಾಹ ನೀರಿನಿಂದ ಜಲಾವೃತವಾಗಿದ್ದು, ರಸ್ತೆ ಸಂಚಾರ ಬಂದ್ ಆಗಿದೆ. ದರ್ಪಣ ತೀರ್ಥ ನದಿಪಾತ್ರದ ಕೃಷಿ ತೋಟಗಳಿಗೆ ನೀರುನುಗ್ಗಿದೆ. ಭಾನುವಾರ ರಸ್ತೆ ಜಲಾವೃತವಾದ ಹಿನ್ನೆಲೆಯಲ್ಲಿ ಜನರ ಮತ್ತು ವಾಹನಗಳ ಸಂಪರ್ಕ ಕಡಿತಗೊಂಡಿದ್ದು, ಸ್ಥಳದಲ್ಲಿ ಗೃಹರಕ್ಷಕ, ಎಸ್‌ಡಿಆರ್‌ಎಫ್ ತಂಡವನ್ನು ನಿಯೋಜನೆ ಮಾಡಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೆಲಸಕ್ಕೆ ಹಾಗೂ ಇತರೆ ಕಾರ್ಯಕ್ಕೆ ಸುಬ್ರಹ್ಮಣ್ಯ ಭಾಗಕ್ಕೆ ಬಂದಿದ್ದ ಗರ್ಭಿಣಿ, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿಯ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಜಲಾವೃತಗೊಂಡ ರಾಜ್ಯ ಹೆದ್ದಾರಿಯಲ್ಲಿ ದೋಣಿಯ ಮೂಲಕ ಎಸ್‌ಡಿಆರ್‌ಎಫ್ ತಂಡವು 8 ಜನರನ್ನು ಸುರಕ್ಷಿತವಾಗಿ ದಾಟಿಸಿ ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ನೇತ್ರಾವತಿ, ಫಲ್ಗುಣಿ ನದಿ ಮತ್ತು ಉಪನದಿಗಳಲ್ಲಿ ಪ್ರವಾಹ ಉಕ್ಕೇರಿ ಹಲವು ತಗ್ಗು ಪ್ರದೇಶಗಳು, ಅಡಕೆ ತೋಟಗಳು ಜಲಾವೃತವಾಗಿವೆ. ಬಂಟ್ವಾಳ, ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಕಾಂತಕೋಡಿ ಎಂಬಲ್ಲಿ ಮಳೆಯ ಅಬ್ಬರಕ್ಕೆ ಸೇತುವೆ ಮುಳುಗಿದ್ದು, ಅಲ್ಲೇ ಸಿಕ್ಕಿಕೊಂಡಿದ್ದ ಪಿಕಪ್ ವಾಹನವನ್ನು ಪಂಚಾಯತ್ ಹಾಗೂ ಪೊಲೀಸ್ ಸಿಬ್ಬಂದಿ ಸಹಾಯದಿಂದ ಸ್ಥಳೀಯರು ಮೇಲಕ್ಕಿತ್ತಿದರು.
ದ.ಕ, ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್: ದ.ಕ ಜಿಲ್ಲೆಯಲ್ಲಿ ಮುಂದಿನ 2 ದಿನಗಳ ಕಾಲ ಆರೆಂಜ್ ಅಲರ್ಟ್ ಮುಂದುವರಿಯಲಿದೆ. ಕರಾವಳಿಯಲ್ಲಿ ಗಂಟೆಗೆ 40-45 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಜು.24, 25ರಂದು ಆರೆಂಜ್ ಅಲರ್ಟ್ ನೀಡಲಾಗಿದ್ದು, ಜು.25ರಿಂದ 28ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಮಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ 45ಕ್ಕೂ ಅಧಿಕ ಮರಗಳು ಧರೆಗುರುಳಿವೆ. ಇದರಿಂದ ಸಂಚಾರ ಹಾಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಉಳ್ಳಾಲದಲ್ಲಿ ಚೆಂಬುಗುಡ್ಡೆಯ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನದ ಬೃಹತ್ ಆವರಣಗೋಡೆ ಶನಿವಾರ ರಾತ್ರಿ ಧರೆಗುರುಳಿದ್ದು, ಪಕ್ಕದ ಸಮುದಾಯ ಭವನವೂ ಅಪಾಯದಂಚಿನಲ್ಲಿದೆ. ಇತ್ತೀಚೆಗಷ್ಟೆ ದೈವಸ್ಥಾನ ಜೀರ್ಣೋದ್ಧಾರಗೊಂಡಿತ್ತು. ಗೋಡೆ ಕುಸಿತದಿಂದ ಚೆಂಬುಗುಡ್ಡೆ-ಕಾಪಿಕಾಡು ಸಂಪರ್ಕ ರಸ್ತೆ ತಾತ್ಕಾಲಿಕ ಬಂದ್ ಆಗಿದೆ.
ಗುರುಪುರ ಪಂಚಾಯಿತಿ ವ್ಯಾಪ್ತಿಯ ಮೂಳೂರು ಮಠದಗುಡ್ಡೆ, ವನ ಭೋಜನ, ಮೂಳೂರು ಮಠದಗುಡ್ಡೆ ಸೈಟ್ ಪ್ರದೇಶದಲ್ಲಿ ಗುಡ್ಡ ಕುಸಿದು ಅಕ್ಕಪಕ್ಕದ ಮನೆಗಳಿಗೆ ಅಪಾಯ ಎದುರಾಗಿದೆ. ಮಂಗಳೂರು ನಗರದ ಮೋರ್ಗನ್‌ಗೇಟ್ ಸಮೀಪ ಕಂಪನಿಯೊಂದರ ಭದ್ರತಾ ಸಿಬ್ಬಂದಿ ಕೊಠಡಿ ಕುಸಿದು ಇಬ್ಬರು ಗಾಯಗೊಂಡಿದ್ದಾರೆ. ವಿಷ್ಣು ಮತ್ತು ಚಂದ್ರಶೇಖರ್ ಪೂಜಾರಿ ಗಾಯಗೊಂಡವರು. ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.
ತುರ್ತು ಸಂಪರ್ಕ ಸಂಖ್ಯೆ: ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆ ಟೋಲ್ ಫ್ರೀ ಸಂಖ್ಯೆ 1077 ಅಥವಾ ಕಂಟ್ರೋಲ್ ರೂಂ ಸಂಖ್ಯೆ 0824-2442590 ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.
ತಹಶೀಲ್ದಾರ್‌ಗೆ ರಜೆ ನೀಡುವ ಹೊಣೆ: ಮಳೆಯ ಪರಿಸ್ಥಿತಿ ಅವಲೋಕಿಸಿ ಆಯ್ದ ಶಾಲೆಗಳಿಗೆ ಸ್ಥಳೀಯವಾಗಿ ರಜೆ ಘೋಷಿಸಲು ಆಯಾ ತಾಲೂಕಿನ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಮಂಗಳೂರು ತಹಶೀಲ್ದಾರ್ ಅನುಮತಿ ಮೇರೆಗೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಅಳಿಯೂರು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸೋಮವಾರ ಕೂಡ ರಜೆ ನೀಡಲಾಗಿದೆ. ಸುಳ್ಯ, ಹರಿಹರ ಕ್ಲಸ್ಟರ್‌ನ ಶಾಲೆಗಳಿಗೆ ಮತ್ತು ಕಡಬ ತಾಲೂಕಿನ ಎಲ್ಲ ಅಂಗನವಾಡಿ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ: ಬಿಡುವು ಕೊಡದ ಮಳೆ; ಭಾಗಮಂಡಲ-ತಲಕಾವೇರಿ ರಸ್ತೆ ಬಂದ್, ಶಾಲಾ-ಕಾಲೇಜುಗಳಿಗೆ ರಜೆ