ಮಂಗಳೂರು : ನಗರದಲ್ಲಿ ಕಳೆದ ಮೂರು ದಿನಗಳಿಂದ ಮಳೆ ಬಿಡದೆ ಸುರಿಯುತ್ತಿದೆ. ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅಲ್ಲಲ್ಲಿ ಭೂ ಕುಸಿತ, ಆಸ್ತಿ-ಪಾಸ್ತಿಗಳಿಗೆ ಹಾನಿ ಸಂಭವಿಸಿದೆ.
ನಗರ ಹೊರ ವಲಯದ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ದೇವಸ್ಥಾನದ ಪೂರ್ವದಲ್ಲಿ ನದಿ ಇದ್ದು, ಪಶ್ಚಿಮದಲ್ಲಿ ಸಮುದ್ರವಿದೆ. ಸಮುದ್ರ ಮತ್ತು ನದಿ ದೇವಸ್ಥಾನದಿಂದ ಕೇವಲ 50 ಮೀಟರ್ ಅಂತರದಲ್ಲಿವೆ. ನೀರಿನ ಮಟ್ಟ ಏರಿಕೆಯ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇಗುಲವೂ ಜಲಾವೃತವಾಗಿದೆ.
ಮಳೆಯಿಂದಾಗಿ 8 ಮನೆ ಪೂರ್ತಿ ಹಾನಿಯಾಗಿವೆ. 12 ಮನೆ ಭಾಗಶಃ ಕುಸಿದಿವೆ. ಹಾಗಾಗಿ, ಅಲ್ಲಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಕಾಶಿ ಮಠದ ಜಿಲ್ಲಾ ಪಂಚಾಯತ್ ಬೋರ್ಡ್ ಶಾಲೆಯ ಕಾಳಜಿ ಕೇಂದ್ರದಲ್ಲಿ 7 ಜನರು ವಾಸ್ತವ್ಯವಿದ್ದು, ಮುಲ್ಕಿಯ ಕಿಲ್ಲಜಾರು ಗ್ರಾಮ ನಂದಗೋಕುಲ ಭವನದ ಕಾಳಜಿ ಕೇಂದ್ರದಲ್ಲಿ 15 ಜನ ಆಶ್ರಯ ಪಡೆದಿದ್ದಾರೆ.
ಅದೇ ರೀತಿ ಮುಲ್ಕಿಯ ಬಪ್ಪನಾಡು ಅನ್ನಪೂರ್ಣೇಶ್ವರಿ ಹಾಲ್ ಕಾಳಜಿ ಕೇಂದ್ರದಲ್ಲಿ 12 ಜನ ಆಶ್ರಯ ಪಡೆದಿದ್ದಾರೆ ಎಂದು ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ತಿಳಿಸಿದ್ದಾರೆ.