ಬಂಟ್ವಾಳ : ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಗೆ ತಾಲೂಕಿನ ಹಲವೆಡೆ ವ್ಯಾಪಕ ಹಾನಿ ಸಂಭವಿಸಿದೆ. ಸಜೀಪನಡು ಗ್ರಾಮದ ಬೊಳಿಮೆ ಎಂಬಲ್ಲಿ ಉಮಾವತಿ ಎಂಬವರ ಮನೆ ಪೂರ್ಣ ಹಾನಿಯಾದರೆ, ಬಾಳೆಪುಣಿ ಗ್ರಾಮದ ಕಣಂತೂರು ಎಂಬಲ್ಲಿ ಗುಡ್ಡ ಜರಿದು ನೆರೆನೀರು ತೋಟಕ್ಕೆ ನುಗ್ಗಿದೆ.
ನರಿಕೊಂಬು ಗ್ರಾಮದ ಹಮೀದ್ ಎಂಬುವರ ಮನೆಯ ಪಕ್ಕ ಗುಡ್ಡ ಕುಸಿದರೆ, ಸಜಿಪಪಡು ಗ್ರಾಮದ ಸೋಮನಾಥ್ ಮೂಲ್ಯ ಅವರ ಭತ್ತದ ಗದ್ದೆಗೆ ನೀರು ನುಗ್ಗಿದೆ. ವಿಟ್ಲ-ಕಸಬ ಗ್ರಾಮದ ಸೇರಾಜೆ ಸೇರಿದಂತೆ ಸಜಿಪಮುನ್ನೂರು ಗ್ರಾಮದ ನಂದಾವರದ ಮಹಮ್ಮದ್ ಆರಿಫ್ ಎಂಬವರ ಮನೆಗೆ ಹಾನಿಯಾಗಿದೆ.
ಒಟ್ಟು 3 ಮನೆಗಳಿಗೆ ಹಾನಿಯಾದರೆ, 0.25 ಹೆಕ್ಟೇರ್ ಅಡಕೆ ತೋಟ ಮತ್ತು 0.25 ಹೆಕ್ಟೇರ್ ಭತ್ತದ ಕೃಷಿಗೆ ಹಾನಿ ಸಂಭವಿಸಿದೆ ಎಂದು ಕಂದಾಯ ಇಲಾಖೆ ಕಚೇರಿ ಮಾಹಿತಿ ತಿಳಿಸಿದೆ. ಬಿ.ಸಿ ರೋಡು ಕೋಣಾಜೆ ರಾಜ್ಯ ಹೆದ್ದಾರಿಯ ಮೆಲ್ಕಾರ್ನಲ್ಲಿ ಮೆಸ್ಕಾಂ ಇಲಾಖೆಗೆ ಸೇರಿದ ನಾಲ್ಕು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇನ್ನು ನಾಲ್ಕು ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿದ್ದು ಅವುಗಳ ತಂತಿಗಳು ಕಡಿದು ಬಿದ್ದಿವೆ. ಮಳೆಯಿಂದ ಈ ಭಾಗದ ಒಟ್ಟು ಆರು ಟ್ರಾನ್ಸ್ಫಾರ್ಮರ್ಗಳ ವಿದ್ಯುತ್ ಸಂಪರ್ಕ ಕಡಿತಮಾಡಲಾಗಿಯಿತು.