ಮಂಗಳೂರು: ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಜನ್ಮಸ್ಥಾನ ಹಾಗೂ ಮೂಲ ಸ್ಥಾನದಲ್ಲಿ ಗೊಂದಲ ಸೃಷ್ಟಿ ಮಾಡಿ, ಚರಿತ್ರೆ ತಿರುಚುವ ಯತ್ನ ಮಾಡಲಾಗುತ್ತಿದೆ ಎಂದು ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಗ್ಗೆ ಯಾವುದೇ ಗೊಂದಲ ಮಾಡುವ ಅವಶ್ಯಕತೆ ಇಲ್ಲ. ಆದ್ದರಿಂದ ಕೋಟಿ-ಚೆನ್ನಯರು ಹುಟ್ಟಿದ ಸ್ಥಳ ಪಡುಮಲೆ ಹಾಗೂ ಅವರ ತಾಯಿ ದೇಯಿ ಬೈದೇತಿ ಹುಟ್ಟಿದ ಮೂಲ ಸ್ಥಾನ ಕೂವೆ ತೋಟದ ಜೀರ್ಣೋದ್ಧಾರದ ಅಗತ್ಯವಿದೆ ಎಂದು ಹೇಳಿದರು.
ಕೋಟಿ-ಚೆನ್ನಯರು ನಮ್ಮ ನಾಡಿನ, ದೇಶದ, ಜಗತ್ತಿನ ಸೊತ್ತಾಗಬೇಕೆ ಹೊರತು ಯಾವುದೇ ಜಾತಿಯ, ರಾಜಕೀಯ ಪಕ್ಷಗಳ ಸೊತ್ತಾಗಬಾರದು. ಅಷ್ಟಮಂಗಲ ಪ್ರಶ್ನೆಯಲ್ಲಿ ನಮಗೆ ಕೋಟಿ-ಚೆನ್ನಯರ ತಾಯಿ ದೇಯಿ ಬೈದೇತಿ ಸಮಾಧಿ, ನಾಗಬ್ರಹ್ಮರ ಗುಡಿ, ರಕ್ತೇಶ್ವರಿ, ರಕ್ತೇಶ್ವರಿ ಗುಡಿ, ತೀರ್ಥಬಾವಿ ಜೀರ್ಣೋದ್ಧಾರ ಮಾಡಬೇಕು ಎಂಬ ಆದೇಶ ಬಂದಿದೆ ಎಂದರು.
ಓದಿ: ಒಂದೇ ಕುಟುಂಬದ ಮೂವರ ಸಾವು ಪ್ರಕರಣಕ್ಕೆ ಟ್ವಿಸ್ಟ್: ಅಪಘಾತಕ್ಕೆ ಬಾಲಕ ಕಾರಣವಂತೆ!
ಅದರ ಬ್ರಹ್ಮಕಲಶದ ಬಳಿಕ ಕೋಟಿ-ಚೆನ್ನಯರ ಮೂಲ ಸ್ಥಾನ, ಜನ್ಮಸ್ಥಾನ ನಿರ್ಮಾಣ ಕಾರ್ಯವನ್ನು ಮಾಡಬೇಕೆಂಬ ಆದೇಶ ಬಂದಿದೆ. ಅದರಂತೆ ಇದೀಗ ದೇಯಿ ಬೈದೇತಿ ಸಮಾಧಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಏಪ್ರಿಲ್ಗೆ ಇದು ಸಂಪೂರ್ಣವಾಗಲಿದೆ ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರು.
ಯಾವುದೇ ರಾಜಕೀಯವಿರದ ಕಾಲದಲ್ಲಿ ಬಂದಿರುವ ದಾಮೋದರ ಕಲ್ಮಾಡಿಯವರ ಪಾಡ್ದನಗಳು, ಬನ್ನಂಜೆಯವರ ಸಂಶೋಧನಾ ಗ್ರಂಥ, ಪಂಜೇ ಮಂಗೇಶರಾಯರ ಕೃತಿ, ಜರ್ಮನಿಯ ಹೆರ್ಮನ್ ಮೊಗ್ಲಿಂಗ್, ಎ.ಸಿ.ಬರ್ನಲ್ ಮುಂತಾದವರ ಯಾರ ಕೃತಿಯಲ್ಲಿಯೂ ಗೆಜ್ಜೆಗಿರಿ ದನ ಬಿತ್ತಿಲಿನ ಉಲ್ಲೇಖವೇ ಇಲ್ಲ. ಎಲ್ಲಾ ಕೃತಿಗಳಲ್ಲಿಯೂ ಪಡಮಲೆಯೇ ಕೋಟಿ-ಚೆನ್ನಯರ ಜನ್ಮಸ್ಥಾನ ಹಾಗೂ ಕೂವೆ ತೋಟವೇ ಮೂಲ ಸ್ಥಾನ ಎಂಬ ಉಲ್ಲೇಖವಿದೆ ಎಂದರು.