ಮಂಗಳೂರು: ಮಾಜಿ ಸಚಿವ ರಮಾನಾಥ ರೈ ಅವರ ಆಪ್ತರಿಂದ ನನ್ನ ಪತ್ನಿಯನ್ನು ರೇಪ್ ಮಾಡಿ ಕೊಲ್ಲುವ ಬಗ್ಗೆ ಬೆದರಿಕೆ ಪತ್ರಗಳು ಬರುತ್ತಿವೆ ಎಂದು ಕಿಯೋನಿಕ್ಸ್ ಅಧ್ಯಕ್ಷ, ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದ ಬಳಿಕ ಇಂತಹ ಪತ್ರಗಳು ಬರುತ್ತಲೇ ಇವೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ 2018ರಲ್ಲಿ ದೂರು ದಾಖಲಿಸಿದ್ದೆ. ಮುಂದೆ ಇಂತಹ ಪತ್ರಗಳು ಬಂದರೆ ರಮಾನಾಥ ರೈ ಅವರ ಜನ್ಮ ಜಾಲಾಡಿಸುತ್ತೇನೆ ಎಂದರು.
ರಮಾನಾಥ ರೈ ಅವರ ಆಪ್ತರೇ ಈ ಪತ್ರ ಬರೆಯುತ್ತಿದ್ದಾರೆ ಎಂದು ಆರೋಪಿಸಿದ ಅವರು, ಒಂದು ವೇಳೆ ಅವರ ಪತ್ನಿಗೆ ಹೀಗೆ ಪತ್ರ ಬರೆದರೆ ಸುಮ್ಮನಿರುತ್ತಿದ್ದರೇ ಎಂದು ಪ್ರಶ್ನಿಸಿದರು.
ಎಸ್ಡಿಪಿಐನೊಂದಿಗೆ ಹೊಂದಾಣಿಕೆ ಮಾಡಿ ಬಂಟ್ವಾಳ ಪುರಸಭೆಯಲ್ಲಿ ಅಧಿಕಾರಕ್ಕೆ ಏರಿದ ಬಗ್ಗೆ ನಾನು ಭಾಷಣ ಮಾಡುವ ವೇಳೆ ಶರತ್ ಮಡಿವಾಳನನ್ನು ಕೊಂದವರ ಜೊತೆ ರಮಾನಾಥ ರೈ ಹೊಂದಾಣಿಕೆ ಮಾಡಿಕೊಂಡಿದ್ದರು ಎಂದು ಹೇಳಿದ್ದೆ. ಆದರೆ ಅವರು ಕೊಲೆ ಮಾಡಿದ್ದಾರೆ ಎಂದು ಹೇಳಿಲ್ಲ. ಆದರೆ ಅದನ್ನು ತಪ್ಪಾಗಿ ಅರ್ಥ ಬರುವಂತೆ ಮಾಡಿ ನನ್ನ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಬಂಧಿಸುವುದಿದ್ದರೆ ರಮಾನಾಥ ರೈ ಅವರನ್ನು ಬಂಧಿಸಬೇಕು. ಅವರು ಚುನಾವಣೆ ಸಂದರ್ಭದಲ್ಲಿ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಾಯಿ ಒಂದೇ ಎಂದು ಹೇಳಿದ್ದರು. ಮಾಜಿ ಸಚಿವ ರಮಾನಾಥ ರೈ ಅವರದು ಮುಖ ಮಾತ್ರ ಭಾರತ, ದೇಹ ಪಾಕಿಸ್ತಾನದ್ದು ಎಂದು ಟೀಕಿಸಿದರು.
ಕಾಂಗ್ರೆಸ್ ಮತ್ತು ಎಸ್ಡಿಪಿಐನದು ಗಂಡಭೇರುಂಡ ಪಕ್ಷಿ ತರಹ. ಒಂದೇ ದೇಹ, ಎರಡು ಮುಖ. ಮುಂದೆ ಇದೇ ತರಹವಾದರೆ ಕಾಂಗ್ರೆಸ್ ನಿರ್ನಾಮವಾಗಲಿದೆ. ಮುಂದೆ ಕಾಂಗ್ರೆಸ್ನಲ್ಲಿ ರಮಾನಾಥ ರೈಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ನಾಶವಾಗಲಿದೆ ಎಂದರು.