ಸುಳ್ಯ: ವಿಧಾನಸಭಾ ಕ್ಷೇತ್ರದ ಸುಳ್ಯ ಹಾಗೂ ಕಡಬ ತಾಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸಾ ನಿರ್ವಹಣಾ ಪರಿಕರಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಒಟ್ಟು 1 ಕೋಟಿ 3 ಲಕ್ಷ ರೂ. ಮಂಜೂರು ಮಾಡಿದೆ ಎಂದು ಶಾಸಕ ಎಸ್.ಅಂಗಾರ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅಂಗಾರ, ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ 50 ಬೆಡ್‍ಗಳಿಗೆ ಹೈಪ್ಲೋ ಆಕ್ಸಿಜನ್, ಏರ್ ಮತ್ತು ವ್ಯಾಕ್ಯೂಮ್ ಪಾಯಿಂಟ್ ಅಳವಡಿಸಲು 66 ಲಕ್ಷ ರೂ. ಹಾಗೂ ಕಡಬ ಸಮುದಾಯ ಆಸ್ಪತ್ರೆಯ 30 ಬೆಡ್‍ಗಳಿಗೆ ಹೈಪ್ಲೋ ಆಕ್ಸಿಜನ್, ಏರ್ ಮತ್ತು ವ್ಯಾಕ್ಯೂಮ್ ಪಾಯಿಂಟ್ ಅಳವಡಿಸಲು 48 ಲಕ್ಷ ರೂ. ಸೇರಿದಂತೆ ಒಟ್ಟು ಒಂದು ಕೋಟಿಯ ಮೂರು ಲಕ್ಷ ಅನುದಾನ ಮಂಜೂರುಗೊಂಡಿದೆ ಎಂದಿದ್ದಾರೆ.
ಈಗಾಗಲೇ ಈ ವಿಚಾರದಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮಲು ಅವರು ಅನುದಾನ ಮಂಜೂರುಗೊಳಿಸಿ ಆದೇಶ ನೀಡಿದ್ದಾರೆ. ತಕ್ಷಣ ಆಸ್ಪತ್ರೆಗಳಿಗೆ ನಿಗದಿತ ಪ್ರಮಾಣದಲ್ಲಿ ವ್ಯವಸ್ಥೆಗಳನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.