ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಮರ್ಪಣೆಗೊಳ್ಳಲಿರುವ ನೂತನ ಬ್ರಹ್ಮರಥವು ಅಕ್ಟೋಬರ್ 2ರಂದು ಉಪ್ಪಿನಂಗಡಿ, ಕಡಬದ ಮೂಲಕ ತೆರಳುವ ರಥಕ್ಕೆ ವಿವಿಧ ಕಡೆಗಳಲ್ಲಿ ಅದ್ಧೂರಿ ಸ್ವಾಗತ ನೀಡಲು ಸಿದ್ಧತೆಗಳು ಆರಂಭವಾಗಿದೆ.
![Grand Welcome to the new Brahmaratha of Kukke Subramanya](https://etvbharatimages.akamaized.net/etvbharat/prod-images/4595882_th.jpg)
ಉದ್ಯಮಿ ಎನ್. ಮುತ್ತಪ್ಪ ರೈ ಹಾಗೂ ಕಡಬದ ಅಜಿತ್ ಶೆಟ್ಟಿ ಅವರು 2.5 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬ್ರಹ್ಮರಥವನ್ನು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಕಾಣಿಕೆಯಾಗಿ ಸಮರ್ಪಣೆ ಮಾಡಲಿದ್ದಾರೆ.
ಬ್ರಹ್ಮರಥವು ಇಂದು ಬೆಳಿಗ್ಗೆ ಕೋಟೇಶ್ವರದಿಂದ ಹೊರಟು ಮೂಲ್ಕಿ, ಬಪ್ಪನಾಡು ಮಾರ್ಗವಾಗಿ ಸಂಜೆ ವೇಳೆ ಮಂಗಳೂರಿನ ಕದ್ರಿಗೆ ತಲುಪಲಿದೆ. ಕದ್ರಿಯಲ್ಲಿ ತಂಗಿ ಅಕ್ಟೋಬರ್ 1ರಂದು ಬೆಳಿಗ್ಗೆ ಇಲ್ಲಿಂದ ಹೊರಟು ಉಪ್ಪಿನಂಗಡಿ, ರಾಮಕುಂಜ, ಆಲಂಕಾರು ಮೂಲಕ ಸಂಜೆಯ ವೇಳೆಗೆ ಬಲ್ಯ ತಲುಪಲಿದೆ. ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ವಠಾರದಲ್ಲಿ ತಂಗಿ ಮರುದಿನ ಬೆಳಿಗ್ಗೆ 9.30ರ ವೇಳೆಗೆ ಕಡಬ ಪ್ರವೇಶ ಮಾಡಲಿದೆ. ಈ ವೇಳೆ ಸ್ಥಳೀಯ ಸಂಘ ಸಂಸ್ಥೆಗಳು, ವಿದ್ಯಾಸಂಸ್ಥೆಗಳು, ದೇವಸ್ಥಾನಗಳು, ಭಜನಾ ಮಂದಿರಗಳ ಆಶ್ರಯದಲ್ಲಿ ಭವ್ಯ ಸ್ವಾಗತ ಕೋರುವ ಸಿದ್ಧತೆ ನಡೆಸಲಾಗಿದೆ.
ಕಡಬ ಎಪಿಎಂಸಿ ಆವರಣದ ಬಳಿ ಪುಷ್ಪಾರ್ಚನೆ ಮಾಡಿ, ರಥವನ್ನು ಸ್ವಾಗತಿಸಿ ಅಲ್ಲಿಂದ ಚೆಂಡೆ, ವಾದನ, ಕಹಳೆ, ಭಜನಾ ಮೇಳ, ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ತರಲಾಗುತ್ತದೆ.