ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮತ್ತು ಕೋಡಿಂಬಾಳ ಗ್ರಾಮಗಳನ್ನು ಒಳಗೊಂಡ ಕಡಬ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸಿ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
ಕಡಬ-ಕೋಡಿಂಬಾಳ ಗ್ರಾಮ ಒಳಗೊಂಡಿರುವ ಕಡಬ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 9546 ಜನಸಂಖ್ಯೆ ಇದ್ದು, 18.70 ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿದೆ. ಮೇ 27 ರಂದು ಸರಕಾರದ ಮುಖ್ಯ ಕಾರ್ಯದರ್ಶಿ ಕಡಬ ಪಟ್ಟಣ ಪಂಚಾಯಿತಿ ಎಂದು ಅಧಿಕೃತ ಆದೇಶ ಹೊರಡಿಸಿದ್ದು, ಮುಖ್ಯಾಧಿಕಾರಿ ನೇಮಕಕ್ಕೆ ಆದೇಶ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕಡಬಕ್ಕೆ ಯಾವುದೇ ಕ್ಷಣದಲ್ಲಿ ಹೊಸ ಮುಖ್ಯಾಧಿಕಾರಿ ನೇಮಕ ಸಾಧ್ಯತೆ ಇದೆ. ಈಗಾಗಲೇ ಕಡಬವು ತಾಲೂಕು ಕೇಂದ್ರವಾಗಿ ಘೋಷಣೆ ಆದ ಬಳಿಕ ಕಡಬ ಪಟ್ಟಣ ಪಂಚಾಯಿತಿ ಆಗಿ ಮಾಡಬೇಕೆಂಬ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿತ್ತು. ಈ ಬಳಿಕ ಕಡಬ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸಿ ಘೋಷಣೆಯಾಗಿತ್ತು.
ಇದೀಗ ಮುಖ್ಯಾಧಿಕಾರಿ ನೇಮಕಕ್ಕೂ ಅಧಿಕೃತವಾಗಿ ಆದೇಶ ಬಂದಿದೆ. ಪಟ್ಟಣ ಪಂಚಾಯಿತಿ ಆಗಿ ಬದಲಾವಣೆ ಆದರೂ ಈಗಾಗಲೇ ಕಡಬ ಕೋಡಿಂಬಾಳ ಪ್ರದೇಶದಲ್ಲಿ ವಿದ್ಯುತ್, ಕುಡಿಯುವ ನೀರು, ರಸ್ತೆಗಳ ಸಮಸ್ಯೆಗಳು ಸೇರಿದಂತೆ ಹಲವಾರು ಅಗತ್ಯ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಕಾಡುತ್ತಿವೆ. ಮುಂದಿನ ದಿನಗಳಲ್ಲಿ ಇವುಗಳ ಪರಿಹಾರ ಸಾಧ್ಯವಾಗಬಹುದು ಎಂಬುದರ ಬಗ್ಗೆ ಸಾರ್ವಜನಿಕರು ಭರವಸೆ ಇಟ್ಚಿದ್ದಾರೆ.