ಬೆಳ್ತಂಗಡಿ: ಮದ್ಯವ್ಯಸನದ ಚಟಕ್ಕೆ ಬಲಿಯಾಗುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹಾನಿಯಾಗುತ್ತದೆ. ಕುಟುಂಬದ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಕುಟುಂಬದೊಳಗೆ ಪ್ರೀತಿ - ವಿಶ್ವಾಸ ಕಡಿಮೆಯಾಗಿ ಮಾನವೀಯ ಸಂಬಂಧಗಳು ಕೆಟ್ಟು ವ್ಯಕ್ತಿತ್ವವೇ ನಾಶವಾಗುತ್ತದೆ. ಆದುದರಿಂದ ವ್ಯಸನ ಮುಕ್ತ ಮನೆ, ಸಮಾಜ ಹಾಗೂ ತನ್ಮೂಲಕ ಆರೋಗ್ಯಪೂರ್ಣ ರಾಷ್ಟ್ರ ನಿರ್ಮಾಣವಾಗಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ದಕ್ಷ ನೇತೃತ್ವದಲ್ಲಿ ಮಾಡುತ್ತಿರುವ ಮದ್ಯವ್ಯಸನ ಮುಕ್ತ ಸಮಾಜ ನಿರ್ಮಾಣ ಶ್ರೇಷ್ಠವಾದ ಕಾಯಕವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಬುಧವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಆಯೋಜಿಸಿದ ನವಜೀವನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರಿಗೂ ನಮಸ್ಕಾರ, ತಮಗೆಲ್ಲರಿಗೂ ಹಾರ್ದಿಕ ಅಭಿನಂದನೆಗಳು ಎಂದು ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ರಾಜ್ಯಪಾಲರು, ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳವು ಇಂದು ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧದಾನ ಎಂಬ ಚತುರ್ವಿಧ ದಾನಗಳಿಂದ ವಿಶ್ವವಿಖ್ಯಾತವಾಗಿದೆ. ಹೆಗ್ಗಡೆಯವರು ಪ್ರಾರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಸೇವೆಯನ್ನು ಅವರು ಅಭಿನಂದಿಸಿದರು. ವಿಶೇಷವಾಗಿ ಮಹಿಳಾ ಸಬಲೀಕರಣ ಹಾಗೂ ಉಚಿತ ಆರೋಗ್ಯಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ಭಾರತ ವಿಶ್ವ ಗುರುವಿನ ಮಾನ್ಯತೆಗೆ ಪಾತ್ರವಾಗಿದೆ: ತಾನು ಕೇಂದ್ರ ಸಚಿವನಾಗಿದ್ದಾಗ ವ್ಯಸನಮುಕ್ತ ಸಮಾಜ ರೂಪಿಸುವ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದೆ. ಮದ್ಯ ಉತ್ಪಾದನೆ, ಮಾರಾಟ ಹಾಗೂ ವ್ಯಸನ ತಡೆಗಟ್ಟಿದಾಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಮದ್ಯವ್ಯಸನಮುಕ್ತರು ತಮ್ಮ ಪರಿಸರದದವರೂ ಮದ್ಯಪಾನಕ್ಕೆ ಬಲಿಯಾಗದಂತೆ ತಡೆಯಬೇಕು.
ಯುವಜನತೆ ಮದ್ಯಪಾನದ ಚಟಕ್ಕೆ ಬಲಿಯಾಗದಂತೆ ಅರಿವು, ಜಾಗೃತಿ ಮೂಡಿಸಬೇಕು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಇಂದು ಭಾರತ ವಿಶ್ವ ಗುರುವಿನ ಮಾನ್ಯತೆಗೆ ಪಾತ್ರವಾಗಿದೆ. ವ್ಯಸನಮುಕ್ತ ರಾಷ್ಟ್ರವಾಗಿ ಆರೋಗ್ಯಪೂರ್ಣ ಸಮಾಜ ರೂಪಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ. ವ್ಯಸನಮುಕ್ತ ಭಾರತ ನಿರ್ಮಾಣದ ಮೂಲಕ ಎಲ್ಲರ ಭಾಗ್ಯದ ಬಾಗಿಲು ತೆರೆದು ಸರ್ವರೂ ಸುಖ-ಶಾಂತಿ, ನೆಮ್ಮದಿಯ ಜೀವನದೊಂದಿಗೆ ಲೋಕಕಲ್ಯಾಣವಾಗಲಿ ಎಂದು ಅವರು ಹಾರೈಸಿದರು.
ವ್ಯಸನಮುಕ್ತರು ಪರಿಶುದ್ಧರಾದ ಪವಿತ್ರಾತ್ಮರು: ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದುಶ್ಚಟ ಇರುವವರೆಲ್ಲ ದುಷ್ಟರು. ಮದ್ಯಪಾನದಿಂದ ವ್ಯಕ್ತಿತ್ವದ ಸರ್ವನಾಶವಾಗಿ ಗೌರವಯುತ ಜೀವನ ಸಾಧ್ಯವಾಗುವುದಿಲ್ಲ. ಮದ್ಯವ್ಯಸನ ಮುಕ್ತರು ಪರಿಶುದ್ಧರಾದ ಪವಿತ್ರಾತ್ಮರಾಗಿದ್ದೀರಿ. ಇಂದು ದೇವರ ದರ್ಶನದಿಂದ ಶ್ರೀ ಮಂಜುನಾಥ ಸ್ವಾಮಿಯ ವಿಶೇಷ ಅನುಗ್ರಹ ನಿಮಗೆ ದೊರಕಿದೆ ಎಂದು ವ್ಯಸನ ಮುಕ್ತರನ್ನು ಅಭಿನಂದಿಸಿದರು.
ಮಹಿಳೆಯರು ಸಂತೋಷ ಮತ್ತು ನೆಮ್ಮದಿಯಿಂದ ಇದ್ದರೆ ಮನೆಯಲ್ಲಿ, ಸಮಾಜದಲ್ಲಿ ಹಾಗೂ ದೇಶದಲ್ಲಿ ಸುಖ-ಶಾಂತಿ ನೆಮ್ಮದಿ ಇರುತ್ತದೆ. ವ್ಯಸನಮುಕ್ತರು ದೃಢ ಸಂಕಲ್ಪದಿಂದ ಪ್ರಜ್ಞಾವಂತ ನಾಗರಿಕರಾಗಿ ಎಲ್ಲಾ ದುರ್ಗುಣಗಳ ನಾಶ ಮಾಡಿ ಸದಾಚಾರ ಸಂಪನ್ನರಾಗಿ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಬೇಕು ಎಂದು ಅವರು ಸಲಹೆ ನೀಡಿದರು.
ಮನೆಯೇ ಮಂದಿರವಾಗಲಿ: ಶುಭಾಶಂಸನೆ ಮಾಡಿದ ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಮನುಷ್ಯ ದೃಢಸಂಕಲ್ಪದೊಂದಿಗೆ ಯಾವುದೇ ವಿಕಲ್ಪಗಳಿಗೆ ಬಲಿಯಾಗದೆ ಸಾರ್ಥಕ ಜಿವನ ನಡೆಸಬೇಕು. ಯಾವುದೇ ಔಷಧಿ ಇಲ್ಲದೆ, 8 ದಿನಗಳ ಮದ್ಯವರ್ಜನ ಶಿಬಿರದಲ್ಲಿ ಮನಪರಿವರ್ತನೆ ಮೂಲಕ ವ್ಯಸನ ಮುಕ್ತರಾದವರು ಮರುಜನ್ಮ ಪಡೆದಂತೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ಗೌರವದಿಂದ ಶಾಂತಿಯುತ ಜೀವನ ಮಾಡಬೇಕು. ಆಗ ಮನೆಯೇ ಮಂದಿರವಾಗುತ್ತದೆ. ಮದ್ಯಪಾನದಿಂದ ಧನಹಾನಿ, ಮಾನಹಾನಿ ಮತ್ತು ಪ್ರಾಣಹಾನಿ ಮೊದಲಾದ ದುರಂತಗಳು ಸಂಭವಿಸುತ್ತವೆ ಎಂದು ಅವರು ಎಚ್ಚರಿಕೆ ನೀಡಿದರು.
ಮಂಜುನಾಥ ಸ್ವಾಮಿಯ ದರ್ಶನ ಪಡೆದು ರಾಜ್ಯಪಾಲರು: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಪತ್ನಿ ಅನಿತಾ ಗೆಹ್ಲೋಟ್ ಸೇರಿದಂತೆ ಮೊಮ್ಮಕ್ಕಳೊಂದಿಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಇದನ್ನೂ ಓದಿ:ಮಠಾಧೀಶರಿಂದ ನಮ್ಮಲಿ ಅಧ್ಯಾತ್ಮಿಕ ಭಾವನೆಗಳು ಜಾಗೃತವಾಗಿ ಉಳಿದಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ..