ಪುತ್ತೂರು (ದ.ಕ): ವಿಶ್ವದಲ್ಲಿ ಅತ್ಯಂತ ಭೀಕರ ಹಾವಳಿ ಸೃಷ್ಟಿಸಿರುವ ಕೊರೊನಾ ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡಿದೆ. ಕೋಟ್ಯಂತರ ಮಂದಿಯ ಬದುಕನ್ನು ನರಕಗೊಳಿಸಿದೆ. ಹಾಗಿದ್ದರೂ ಮಾನವನ ಬದುಕಿಗೆ ಹೊಸ ಪಾಠಗಳನ್ನು ಕೂಡ ಕಲಿಸಿದೆ.
ಆಡಂಬರದ ಜೀವನಕ್ಕೆ ಕಡಿವಾಣ ಹಾಕಿದೆ. ಶಿಕ್ಷಣ ವ್ಯವಸ್ಥೆಗೆ ಮತ್ತೆ ಗುರುಕುಲ ಪದ್ಧತಿಯ ಹೊಸ ಸ್ಥಿತ್ಯಂತರ ಸೃಷ್ಟಿಸಿದೆ. ಅದರಿಂದಾಗಿಯೇ ಇದೀಗ ಶಾಲೆಗಳು ಮನೆ ಬಾಗಿಲಿಗೆ ಬಂದಿವೆ. ವಠಾರ ಶಾಲೆ ಎಂಬ ಕಲ್ಪನೆಯೊಂದಿಗೆ ಮಕ್ಕಳು ಮನೆಯಂಗಳದಲ್ಲಿ ಪಾಠ ಕೇಳುವಂತಾಗಿದೆ.
ಜೂನ್ ಒಂದರಂದು ಹೆಣ ಭಾರದ ಬ್ಯಾಗುಗಳನ್ನು ಹೊತ್ತುಕೊಂಡು ಶಾಲೆಗೆ ಹೊರಡಬೇಕಾಗಿದ್ದ ಮಕ್ಕಳು ಕೊರೊನಾ ಎಂಬ ಹೆಮ್ಮಾರಿ ದೆಸೆಯಿಂದ ಮನೆಯಲ್ಲಿ ಉಳಿಯಬೇಕಾಯಿತು. ಕಳೆದ 4 ತಿಂಗಳುಗಳಿಂದ ಮಕ್ಕಳಿಗೆ ಪಾಠ, ಪಠ್ಯಗಳು ದೂರವಾದವು. ಖಾಸಗಿ ಶಾಲೆಗಳು ವಾಟ್ಸಪ್, ಆನ್‌ಲೈನ್ ಮೂಲಕ ಮಕ್ಕಳಿಗೆ ಕನಿಷ್ಠ ಪಾಠದ ನೆನಪು ಮಾಡಲು ಪ್ರಾರಂಭ ಮಾಡಿದವು. ಆದರೆ ಗ್ರಾಮೀಣ ಭಾಗದ ಮಕ್ಕಳು ಸಮರ್ಪಕವಾದ ವ್ಯವಸ್ಥೆ ಇಲ್ಲದೆ ಬಳಲುವಂತಾಯಿತು.
ಗುರುಕುಲ ಪದ್ಧತಿ ನೆನಪಿಸುವ 'ವಿದ್ಯಾಗಮ' ಯೋಜನೆ:
ಸರ್ಕಾರಿ ಶಾಲೆಗಳು ಮತ್ತೆ ಗುರುಕುಲ ಪದ್ಧತಿಯ ಶಿಕ್ಷಣವನ್ನು ನೆನಪಿಸುವ ವಠಾರ ಶಾಲೆ ಎಂಬ ಚಿಂತನೆಗೆ ಮೊರೆ ಹೋಗಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಕರು ತಮ್ಮ ಸ್ವ ಆಸಕ್ತಿಯಿಂದ ಸೃಷ್ಟಿಸಿದ ವಠಾರ ಶಾಲೆ ಎಂಬ ಕಲ್ಪನೆ ಇದೀಗ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ 'ವಿದ್ಯಾಗಮ' ಯೋಜನೆ ಆರಂಭಕ್ಕೆ ಕಾರಣವಾಯಿತು.
ಶಾಲೆಯ ಕೊಠಡಿಗಳಲ್ಲಿ ಕುಳಿತು ಶಿಕ್ಷಕರ ಪಾಠವನ್ನು ನೇರವಾಗಿ ಕೇಳುತ್ತಿದ್ದ ಮಕ್ಕಳಿಗೆ ವಾಟ್ಸಪ್ ಮತ್ತು ಆನ್‌ಲೈನ್ ತರಗತಿಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗಿಲ್ಲ ಎಂಬುವುದು ಕಟು ಸತ್ಯ. ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳು ಈ ಮೊಬೈಲ್ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಪ್ರಗತಿ ಕಾಣಲು ಸಾಧ್ಯವಾಗುತ್ತಿಲ್ಲ. ಆದರೂ ಕನಿಷ್ಠ ಓದುವ, ಬರೆಯುವ ಕಾಯಕ ಮರೆಯದಂತೆ ಮಾಡುವುದಷ್ಟೇ ಇದರ ಮೂಲ ಉದ್ದೇಶವಾಗಿರುವುದರಿಂದ ಇದು ಸಹ್ಯ ಎನ್ನಬೇಕಾಗಿದೆ.
ಆದರೆ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾದ ಮನೆ ಶಾಲೆ (ವಠಾರ)ಗಳು ಹೊಸ ವ್ಯವಸ್ಥೆಗೆ ನಾಂದಿ ಹಾಡುತ್ತಿವೆ. ಹಳ್ಳಿ ಪ್ರದೇಶಗಳ 5ರಿಂದ 10 ಮಕ್ಕಳನ್ನು ಒಂದೆಡೆ ಸೇರಿಸಿಕೊಂಡು ಮನೆಯೊಂದರಲ್ಲಿ ಮಕ್ಕಳಿಗೆ ಪಾಠ ಹೇಳಲು ಮುಂದಾಗಿರುವ ಶಿಕ್ಷಕರು, ಹೊಸ ಪರಿಸರದ ಜತೆಗೆ ಶಾಲೆ ಎಂಬ ಪ್ರಪಂಚಕ್ಕೆ ಬರುವಂತಾಗಿದೆ.
ಮಕ್ಕಳು ಹಾಗೂ ಶಿಕ್ಷಕರಿಗೆ ಖುಷಿ ನೀಡಿದ ವಠಾರ ಶಿಕ್ಷಣ:
ಸದಾ ಶಾಲಾ ಕೊಠಡಿಗಳಲ್ಲಿಯೇ ಪಾಠ ಕೇಳುತ್ತಿದ್ದ ಮಕ್ಕಳಿಗೂ ತಮ್ಮ ಮನೆ ಅಥವಾ ಪಕ್ಕದ ಮನೆಯಲ್ಲಿ ನಡೆಯುವ ಪಾಠಗಳು ಹೆಚ್ಚು ನೂತನವಾಗಿ ಹಾಗೂ ಆಪ್ಯಾಯಮಾನವಾಗಿ ಕಂಡುಬರುತ್ತಿವೆ. ತಮ್ಮ ಅಥವಾ ಪಕ್ಕದ ಮನೆಯಲ್ಲಿ ಪಾಠ ಶಾಲೆ, ಮನೆಯಂಗಳದ ಪರಿಸರ ಮಕ್ಕಳಲ್ಲಿ ಹೆಚ್ಚು ಆಸಕ್ತಿದಾಯಕವಾದ ಖುಷಿ ಉಂಟು ಮಾಡುತ್ತಿದೆ.
ಕೊರೊನಾ ಲಾಕ್‌ಡೌನ್ ಹಿನ್ನೆಲೆಯೊಂದಿಗೆ ಮುಚ್ಚಿಕೊಂಡ ಶಾಲೆಗಳು ಮಕ್ಕಳ ಪಾಲಿಗೆ ದೂರವಾಗುತ್ತಿದ್ದಂತೆ ಶಿಕ್ಷಕರು ಮಕ್ಕಳ ಮನೆ ಬಾಗಿಲಿಗೆ ಬರುವ ಮೂಲಕ ಮಕ್ಕಳ ಶಿಕ್ಷಣ ವ್ಯವಸ್ಥೆ ಹೊಸ ರೂಪು ಪಡೆದುಕೊಂಡಿದೆ.
ಕೊರೊನಾ ಹೆಮ್ಮಾರಿ ಬರುವ ಮೊದಲು ಹಿಂದಿನ ಗುರುಕುಲ ಪದ್ಧತಿಯ ಶಿಕ್ಷಣವನ್ನು ಹೊರತು ಪಡಿಸಿದರೆ ಇಂತಹ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಶಾಲೆಯ ನಿಯಮ, ನಿಬಂಧನೆಗಳಿಂದ ಸಂಪೂರ್ಣ ದೂರವಾಗಿ ಮಕ್ಕಳ ಜತೆ ಮಕ್ಕಳಾಗುವ ಶಿಕ್ಷಕರು, ಮಕ್ಕಳಲ್ಲಿ ಕುಟುಂಬದ ಕಲ್ಪನೆಯನ್ನು ಹುಟ್ಟು ಹಾಕುವ ಹೊಸ ಶಿಕ್ಷಣ ವ್ಯವಸ್ಥೆ ಬಹುಶಃ ನಮ್ಮ ನಾಡಿನ ಶಿಕ್ಷಣವನ್ನು ಮತ್ತಷ್ಟು ವೈವಿಧ್ಯಪೂರ್ಣವಾಗಿಸಲು ಕಾರಣವಾಗಬಹುದು.
ಕಡಲ ತೀರದ ಭಾರ್ಗವ ಡಾ. ಶಿವರಾಮ ಕಾರಂತ, ಪುತ್ತೂರಿನ ಮಕ್ಕಳ ಮಂಟಪದ ಶಿಕ್ಷಣ ತಜ್ಞ ಡಾ. ಸುಕುಮಾರ ಗೌಡ ಅವರು ಬಹಳ ಹಿಂದಿನಿಂದಲೂ ಕೊಠಡಿಯೊಳಗಿನ ಶಿಕ್ಷಣಕ್ಕಿಂತ ಪರಿಸರದ ಶಿಕ್ಷಣವೇ ಮಕ್ಕಳಿಗೆ ಅಗತ್ಯ. ಮಕ್ಕಳ ಬದುಕಿಗೆ ಇಂತಹ ಶಿಕ್ಷಣದಿಂದ ಮಾತ್ರ ನ್ಯಾಯ ಒದಗಿಸಬಹುದು ಎನ್ನುವುದನ್ನು ಹೇಳುತ್ತಲೇ ಇದ್ದರು. ಅವರ ಚಿಂತನೆಗಳು ಕೊರೊನಾ ಕಲಿಸಿದ ಪಾಠದಿಂದ ಪ್ರಸ್ತುತ ನಿಜವಾಗುತ್ತಿವೆ.
ರಾಜ್ಯದ ಶಿಕ್ಷಕರನ್ನು ಆಕರ್ಷಿಸಿದ 'ಕಲಿಕಾ ಕಾರ್ಡ್':
ಪುತ್ತೂರು ತಾಲೂಕಿನಲ್ಲಿ ಈ ವಿದ್ಯಾಗಮ ಯೋಜನೆಯೊಂದಿಗೆ ಹೊಸ ಚಿಂತನೆ ಆರಂಭ ಮಾಡಲಾಗಿದೆ. ಕಿರಿಯ ಪ್ರಾಥಮಿಕ ಶಾಲೆಯಿಂದ ಹಿಡಿದು ಪ್ರೌಢ ಶಾಲೆಗಳ ತನಕ ಸುಮಾರು 1261 ಕೇಂದ್ರಗಳನ್ನು ಮಾಡಲಾಗುತ್ತಿದೆ. ಇದರೊಂದಿಗೆ ಶಿಕ್ಷಕರಿಗೂ ಫ್ರೆಮ್ ವರ್ಕ್ ನೀಡುವ ಮೂಲಕ ಸವಾಲು ಎದುರಿಸಲು ಸಜ್ಜುಗೊಳಿಸಲಾಗಿತ್ತು.
ಮಕ್ಕಳಿಗೆ ರಾಜ್ಯದ ಇನ್ಯಾವ ಭಾಗದಲ್ಲೂ ಇರದ 'ಕಲಿಕಾ ಕಾರ್ಡ್' ಎಂಬ ಸುಮಾರು 400 ಪುಟದ ಚಟುವಟಿಕಾ ಶಿಕ್ಷಣ ಆರಂಭಿಸಿದ್ದು, ಇದು ಅತ್ಯಂತ ಉತ್ತಮವಾಗಿ ಮಕ್ಕಳ ಶಿಕ್ಷಣದಲ್ಲಿ ಪಾತ್ರ ವಹಿಸುತ್ತಿದೆ. ರಾಜ್ಯದ ಬೇರೆ ಬೇರೆ ಭಾಗದ ಶಿಕ್ಷಕರನ್ನು ಈ ಕಲಿಕಾ ಕಾರ್ಡ್ ಚಿಂತನೆ ಆಕರ್ಷಿಸಿದೆ ಎನ್ನುತ್ತಾರೆ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್.
ಮಕ್ಕಳನ್ನು ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ಆದರೆ ಪುತ್ತೂರು ಶಿಕ್ಷಣ ಇಲಾಖೆಯಿಂದ ವಿಶಿಷ್ಟವಾಗಿ ಸೃಷ್ಟಿಸಿಕೊಂಡ ಕಲಿಕಾ ಕಾರ್ಡ್ ಮೂಲಕ ಆ ಸವಾಲನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹಾಗೂ ವಿದ್ಯಾಗಮ ನೋಡಲ್ ಅಧಿಕಾರಿ ವಿಜಯಕುಮಾರ್ ತಿಳಿಸಿದ್ದಾರೆ.
ಕೊರೊನಾದಿಂದ ಉಂಟಾದ ಸಮಸ್ಯೆಯಿಂದ ಮಕ್ಕಳ ಶಿಕ್ಷಣದ ಜತೆಗೆ ಶಿಕ್ಷಕರಿಗೂ ಮಕ್ಕಳನ್ನು ತಲುಪಲು ಅಸಾಧ್ಯವಾಗಿತ್ತು. ಆದರೆ ಈಗ ಮಕ್ಕಳ ಮನೆಗಳಿಗೆ ಹೋಗಿ ಪಾಠ ಮಾಡುವ ಮೂಲಕ ಮಕ್ಕಳನ್ನು ತಲುಪಲು ಸಾಧ್ಯವಾಗಿದೆ. ಅತ್ಯಂತ ಖುಷಿಯಿಂದ ಶಿಕ್ಷಕರು ಈ ಕೆಲಸ ಮಾಡುತ್ತಿದ್ದಾರೆ. ವಾತಾವರಣ ಬದಲಾವಣೆ ಮಕ್ಕಳಿಗೆ ಮಾತ್ರವಲ್ಲ ಶಿಕ್ಷಕರಿಗೂ ಹೆಚ್ಚಿನ ಸಂತೋಷ ಉಂಟುಮಾಡಿದೆ ಎಂದು ಶಿಕ್ಷಕಿ ಧನ್ಯ ಕುಮಾರಿ ಹೇಳಿದ್ದಾರೆ.