ಬಂಟ್ವಾಳ(ದಕ್ಷಿಣ ಕನ್ನಡ): ಮನೆಗಳ ಆಯ್ಕೆ, ಮಳೆಯ ಸಂದರ್ಭ ಆಗುವ ತೊಂದರೆಗಳನ್ನು ಹೊರತುಪಡಿಸಿ, ಬಂಟ್ವಾಳ ತಾಲೂಕಿನಲ್ಲಿ ರಾಜ್ಯ ಸರ್ಕಾರದ ವಿದ್ಯಾಗಮ ಯೋಜನೆಯನ್ವಯ ಟಿವಿ, ಮೊಬೈಲ್ ಇಲ್ಲದ ಮಕ್ಕಳಿಗೆ ನೇರವಾಗಿ ಶಿಕ್ಷಕರಿಂದಲೇ ಪಾಠ ಹೇಳಿ ಕೊಡಲಾಗ್ತಿದೆ.
ಪ್ರಸ್ತುತ ವಿದ್ಯಾರ್ಥಿಗಳ ತರಗತಿವಾರು ಗುಂಪು ಮಾಡಿ ವಾಟ್ಸ್ಆ್ಯಪ್ನಲ್ಲಿ ಕಲಿಕಾ ಸಾಮಗ್ರಿಗಳ ಚಟುವಟಿಕೆ ವಿಡಿಯೋಗಳನ್ನು ಕಳುಹಿಸಿದರೂ ಕೂಡ ಅದು ನಿರಂತರವಾಗಿ ಮಕ್ಕಳನ್ನು ತಲುಪುತ್ತಿದೆಯೇ ಇಲ್ಲವೇ ಎಂದು ವಿದ್ಯಾಗಮದ ಮೂಲಕ ನೋಡಲಾಗುತ್ತಿದೆ. ಜನವಸತಿ ಪ್ರದೇಶದಲ್ಲಿ ಒಮ್ಮೆ ಸೇರುವಾಗ ವಿದ್ಯಾರ್ಥಿಗಳ ಕಲಿಕಾ ಸಂದೇಹಗಳನ್ನು ಪರಿಹರಿಸಲು ಕಲಿಕಾ ಚಟುವಟಿಕೆ ನೀಡಲು ಸಹಾಯಕವಾಗುತ್ತಿದೆ.
ಡಿಡಿ ಚಂದನದಲ್ಲಿ ಬರುವ ಸಂವೇಗ ಕಾರ್ಯಕ್ರಮದಲ್ಲಿ ಬರುವ ಪಾಠಕ್ಕೆ ಪೂರಕ ಚಟುವಟಿಕೆಗಳನ್ನು ಅಭ್ಯಾಸ ಹಾಳೆ ಮೂಲಕ ನೀಡಲಾಗುತ್ತಿದೆ. ಆ ಬಳಿಕ ಮುಂದಿನ ಭೇಟಿಯಲ್ಲಿ ವಿದ್ಯಾರ್ಥಿಗಳಿಂದ ಅಭ್ಯಾಸ ಹಾಳೆಗಳನ್ನು ಪಡೆದು, ಪರಿಶೀಲಿಸಿ ಮೌಲ್ಯಮಾಪನ ಮಾಡಿ ಸೂಕ್ತ ಮಾರ್ಗದರ್ಶನ ನೀಡಲು ಸಹಕಾರಿಯಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಒತ್ತು ಸಿಗುತ್ತದೆ ಎನ್ನುತ್ತಾರೆ ಮಜಿ ಶಾಲಾ ಶಿಕ್ಷಕಿ ಸಂಗೀತಾ ಶರ್ಮಾ.
ಮೊಬೈಲ್ ಇಲ್ಲದ ವಿದ್ಯಾರ್ಥಿಗಳನ್ನು ಕಲಿಕಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಈ ಮೂಲಕ ಸುಲಭ ಸಾಧ್ಯ. ಶಿಕ್ಷಕರು ವಿದ್ಯಾರ್ಥಿಗಳನ್ನು ಕನಿಷ್ಠ ಸಂಖ್ಯೆಯಲ್ಲಿ ಭೇಟಿ ಮಾಡುವುದರಿಂದ ಪ್ರತಿ ವಿದ್ಯಾರ್ಥಿಗೂ ವೈಯಕ್ತಿಕ ಗಮನ ನೀಡಿ ಕಲಿಕಾ ಕೊರತೆಯನ್ನು ನೀಗಿಸಲು ಅನುಕೂಲವಾಗುವುದು. ಕನಿಷ್ಠ ಕಲಿಕಾ ಮಟ್ಟವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ವಿದ್ಯಾಗಮದಿಂದ ಸಾಧ್ಯ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಸಂಘ ಸಂಸ್ಥೆ, ವಿದ್ಯಾಭಿಮಾನಿ ಸ್ಥಳೀಯರು ಹಾಗೂ ಪೋಷಕರು ಶಿಕ್ಷಕರೊಂದಿಗೆ ಕೈ ಜೋಡಿಸುತ್ತಿದ್ದಾರೆ ಎನ್ನುತ್ತಾರೆ ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರದ ಪ್ರಭಾರ ಅಧಿಕಾರಿ ರಾಧಾಕೃಷ್ಣ ಭಟ್.