ಮಂಗಳೂರು : ಲಾಕ್‌ಡೌನ್ ಪರಿಣಾಮ ನಗರ ಸಂಪೂರ್ಣ ಸ್ತಬ್ಧವಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಹಾಗೂ ಮೆಡಿಕಲ್ ಮುಂತಾದ ಅಗತ್ಯ ಸೇವೆಗಳಿಗೆ ಮಾತ್ರ ಜನ ರಸ್ತೆಗಿಳಿಯುತ್ತಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ 12 ಮಂದಿಗೆ ಕೊರೊನಾ ಸೋಂಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 7-12 ರವರೆಗೆ ಅವಕಾಶ ನೀಡಿದ್ದು, ಆ ಬಳಿಕ ಅನಗತ್ಯ ವಾಹನಗಳ ಸಂಚಾರಗಳ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸುತ್ತಿದೆ. ಮಂಗಳೂರು ಸೆಂಟ್ರಲ್ ಮಾರುಕಟ್ಟೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಸಗಟು ವ್ಯಾಪಾರವನ್ನು ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಗೊಳಿಸಲಾಗಿದೆ.
ನಗರದ ಸ್ಟೇಟ್ ಬ್ಯಾಂಕ್ ಬಸ್ ಸ್ಟ್ಯಾಂಡ್ ಬಳಿ ತರಕಾರಿ, ಹಣ್ಣು, ದಿನಸಿ ಸಾಮಾಗ್ರಿಗಳ ಮಾರಾಟವು ನಡೆಯುತ್ತಿದೆ. ದಿನವೂ ಬೆಳಗ್ಗೆ 7-12ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರೋದರಿಂದ ಯಾವುದೇ ಮುಗಿ ಬೀಳುವ, ಗುಂಪು ಗುಂಪಾಗಿ ಖರೀದಿ ಮಾಡುವ ದೃಶ್ಯ ಕಂಡು ಬರುತ್ತಿಲ್ಲ. ಅಲ್ಲದೆ ಮೀನುಗಾರಿಕೆಯು ಸಂಪೂರ್ಣ ಸ್ಥಗಿತಗೊಂಡಿದೆ. ಯಾವುದೇ ಬೋಟುಗಳು ಸಮುದ್ರಕ್ಕಿಳಿಯದೆ ದಡದಲ್ಲಿ ಲಂಗರು ಹಾಕಿವೆ.
ಆದರೆ, ಗುಜರಾತ್, ಗೋವಾ ಕಡೆಗಳಿಂದ ಬಂದ ಮೀನುಗಳ ಮಾರಾಟ ಮಾತ್ರ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ವಾಹನಗಳ ಸಂಚಾರ ತಡೆಗಟ್ಟಲು ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅನಗತ್ಯ ಸಂಚಾರ ಮಾಡುವ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ. ಆದರೆ, ಪಾಸ್ ಇರುವ, ವೈದ್ಯ ಸೇವೆಯಲ್ಲಿರುವ, ಅಗತ್ಯ ಸಾಮಾಗ್ರಿಗಳ ಸರಬರಾಜು ವಾಹನಗಳಿಗೆ ವಿನಾಯಿತಿ ಇದೆ.