ಮಂಗಳೂರು : ನಗರದ ಹೊರವಲಯದ ಪರಾರಿ ಎಂಬಲ್ಲಿನ ಟೈಲ್ಸ್ ಫ್ಯಾಕ್ಟರಿಯ ಡ್ರೈನೇಜ್ ಒಳಗಡೆ 8 ವರ್ಷದ ಬಾಲಕಿಯ ಮೃತದೇಹ (8 year old Girl dead body) ಪತ್ತೆಯಾಗಿದೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಾಗಿದೆ. ಸಾಕಷ್ಟು ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪರಾರಿ ಎಂಬಲ್ಲಿಯ ರಾಜ್ಟೈಲ್ಸ್ ಫ್ಯಾಕ್ಟರಿ(Raj Tiles Factory)ಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ವಲಸೆ ಕಾರ್ಮಿಕರ ಪುತ್ರಿ ಈ ಬಾಲಕಿ. ಈಕೆ ಇಂದು ಸಂಜೆ 4 ಗಂಟೆಯ ವೇಳೆ ಏಕಾಏಕಿ ನಾಪತ್ತೆಯಾಗಿದ್ದಾಳೆ.
ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಆದರೆ, ಸಂಜೆ 6 ಗಂಟೆ ಹೊತ್ತಿಗೆ ಮಗು ಟೈಲ್ಸ್ ಫ್ಯಾಕ್ಟರಿಯ ಡ್ರೈನೇಜ್ನಲ್ಲಿ ಪತ್ತೆಯಾಗಿದೆ. ತಕ್ಷಣ ಬಾಲಕಿಯನ್ನು ಮೇಲಕ್ಕೆತ್ತಿದರೂ ಆಕೆ ಅದಾಗಲೇ ಮೃತಪಟ್ಟಿದ್ದಳು.
ತಕ್ಷಣ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಬಾಲಕಿಯ ಪೋಷಕರು ಟೈಲ್ಸ್ ಫ್ಯಾಕ್ಟರಿಯಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರೇ ಈ ಕೃತ್ಯ ಎಸಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.
'ಈ ಟೈಲ್ಸ್ ಫ್ಯಾಕ್ಟರಿಯಲ್ಲಿ 30 ಮಂದಿ ಕರ್ನಾಟಕದ ಹಾಗೂ ಹೊರ ರಾಜ್ಯದ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಂದು ಭಾನುವಾರವಾದ್ದರಿಂದ ಇವರಲ್ಲಿ ರಾಜ್ಯದ 10 ಮಂದಿ ಕೆಲಸಕ್ಕೆ ಬಂದಿಲ್ಲ.
ಕೃತ್ಯ ನಡೆದ ಸಂದರ್ಭ ಒಳಗಡೆಯಿದ್ದ 19 ಮಂದಿಯಲ್ಲಿ ಸಾಕಷ್ಟು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಶೀಘ್ರ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುತ್ತದೆ' ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.
ಓದಿ: ಮುಖಾಮುಖಿ ಡಿಕ್ಕಿಯಾಗಿ ಹೊತ್ತಿ ಉರಿದ 2 ಲಾರಿ.. ಮೂವರು ಸಜೀವ ದಹನ ಶಂಕೆ!