ಮಂಗಳೂರು : ಜನನ ಮತ್ತು ಮರಣ ಪ್ರಮಾಣಪತ್ರಗಳು ಇಂದಿನ ಅಗತ್ಯ. ಆದರೆ, ಪ್ರಮಾಣಪತ್ರಗಳನ್ನು ಸ್ಥಳೀಯಾಡಳಿತದಿಂದ ಪಡೆದುಕೊಳ್ಳುವುದೇ ದುಸ್ತರ.
ಈ ಒಂದು ಪ್ರಮಾಣಪತ್ರಕ್ಕಾಗಿ ಹಲವು ಬಾರಿ ಅಲೆದಾಡಬೇಕಾಗುತ್ತದೆ. ಇದಕ್ಕೆ ಮುಕ್ತಿ ನೀಡಲು ಮಂಗಳೂರು ಮಹಾನಗರ ಪಾಲಿಕೆ ಮತ್ತು ಭಾರತೀಯ ಅಂಚೆ ಇಲಾಖೆ ಹೊಸ ಪ್ರಯೋಗ ಮಾಡಿದೆ.
ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಹಾನಗರ ಪಾಲಿಕೆ ಮತ್ತು ಭಾರತೀಯ ಅಂಚೆ ಇಲಾಖೆಯ ಸಹಯೋಗದಲ್ಲಿ ಇದನ್ನು ಜಾರಿಗೆ ತರಲಾಗಿದೆ.
ಅರ್ಜಿ ಸಲ್ಲಿಸುವಾಗಲೇ ಅಂಚೆ ಮೂಲಕ ಪಡೆಯುವ ಬಗ್ಗೆ ಮತ್ತು ನಿಖರವಾದ ವಿಳಾಸವನ್ನು ಅರ್ಜಿದಾರರು ನೀಡಬೇಕಷ್ಟೇ ಸಾಕು. ಇದು ರಾಜ್ಯದಲ್ಲೇ ಮೊದಲ ಪ್ರಯೋಗವಾಗಿದೆ.
ಶುಲ್ಕ ಎಷ್ಟಾಗುತ್ತದೆ? : ಜನನ ಪ್ರಮಾಣಪತ್ರವಾಗಲಿ ಅಥವಾ ಮರಣ ಪ್ರಮಾಣಪತ್ರವಾಗಲಿ ಪಡೆಯಬೇಕಾದರೆ ಅರ್ಜಿ ಹಾಕಲು ಮತ್ತು ಅದನ್ನು ಪಡೆಯಲು ಕನಿಷ್ಟ ಎರಡ್ಮೂರು ಬಾರಿಯಾದರೂ ಅಲೆಯಬೇಕಾಗುತ್ತದೆ. ಅರ್ಜಿ ಕೊಟ್ಟ ಮೇಲೆ ಅದನ್ನು ಸಿದ್ಧವಾಗಿದೆಯೋ ಇಲ್ಲವೋ ಎಂಬ ಸರಿಯಾದ ಮಾಹಿತಿ ಇಲ್ಲದೇ ಮೇಲಿಂದ ಮೇಲೆ ಅಲೆಯಬೇಕಾಗುತ್ತದೆ.
ಇದರಿಂದಾಗಿ ಸಮಯ, ಹಣ ಎಲ್ಲವೂ ವ್ಯರ್ಥವಾಗಲಿದೆ. ಈ ಸಮಸ್ಯೆಯನ್ನು ಅಂಚೆ ಮೂಲಕ ಪ್ರಮಾಣಪತ್ರ ಮನೆ ಬಾಗಲಿಗೆ ತಲುಪಿಸಲಾಗುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ ಅಂಚೆ ಶುಲ್ಕವನ್ನು ನಿಗದಿ ಮಾಡಲಾಗಿದೆ. ಆದರೆ, ಯಾವುದೇ ಭಾಗಕ್ಕೆ ಬೇಕಾದರೂ ಪ್ರಮಾಣಪತ್ರವನ್ನು ತಲುಪಿಸಲಾಗುತ್ತದೆ.
ಈ ವಿಶಿಷ್ಟ ಸೇವೆ ಪ್ರಕಾರ ಜನನ ಮತ್ತು ಮರಣ ಪ್ರಮಾಣಪತ್ರದ ಬಗ್ಗೆ ಮಹಾನಗರ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಬೇಕು. ಬಳಿಕ ಅರ್ಜಿಯನ್ನು ಪರಿಶೀಲಿಸಿದ ಪಾಲಿಕೆಯು ಪ್ರಮಾಣಪತ್ರ ತಯಾರಿಸಿ ಅಂಚೆಗೆ ಕಳುಹಿಸಿಕೊಡುತ್ತದೆ.
ಇದಕ್ಕೆ ಅಂಚೆ ಇಲಾಖೆಯ ನೂರು ರೂ. ಶುಲ್ಕ ಮಾಡಲಿದ್ದು, ಅದನ್ನು ಪ್ರಮಾಣಪತ್ರ ಅರ್ಜಿದಾರರ ಕೈ ಸೇರಿದಾಗ ನೀಡಬೇಕಾಗುತ್ತದೆ. ದೇಶದ ಯಾವುದೇ ಭಾಗಕ್ಕಾದರೂ, ಎಷ್ಟು ಪ್ರತಿ ಬೇಕಾದರೂ ಒಮ್ಮೆಗೆ ಪಡೆಯಬಹುದು ಎನ್ನುತ್ತಾರೆ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್.
ಎಸ್‌ಎಂಎಸ್ ಮೂಲಕ ಮಾಹಿತಿ : ಪಾಲಿಕೆಯಿಂದ ಅಂಚೆ ಇಲಾಖೆಗೆ ಪ್ರಮಾಣಪತ್ರ ತಲುಪಿದ ಬಳಿಕ ಸಂಬಂಧಿಸಿದವರಿಗೆ ಎಸ್ಎಂಎಸ್ ಮೂಲಕ ತಿಳಿಸಲಾಗುತ್ತದೆ. ಅಲ್ಲದೇ, ಮನೆ ಬಾಗಿಲಿಗೆ ಪ್ರಮಾಣಪತ್ರ ತಲುಪುವವರೆಗೂ ನಿರಂತರವಾಗಿ ಮಾಹಿತಿ ಸಂಬಂಧಿಸಿದವರಿಗೆ ನೀಡಲಾಗುತ್ತದೆ.
ಮಂಗಳೂರಿನಲ್ಲಿ ಹಲವು ಆಸ್ಪತ್ರೆಗಳಿದ್ದು, ರಾಜ್ಯ, ಹೊರ ರಾಜ್ಯಗಳಿಂದ ಹೆರಿಗೆ ಮತ್ತು ಇನ್ನಿತರ ಚಿಕಿತ್ಸೆಗೆ ಬರುತ್ತಾರೆ. ಹೀಗೆ ರಾಜ್ಯ ಹೊರ ಜಿಲ್ಲೆ, ಹೊರ ರಾಜ್ಯದಿಂದ ಬಂದು ಇಲ್ಲಿ ಹೆರಿಗೆಯಾಗುವುದು ಮತ್ತು ಸಾವನ್ನಪ್ಪುವುದು ಘಟಿಸುತ್ತಲೇ ಇರುತ್ತದೆ. ಇಂತವರಿಗೆ ಈ ಯೋಜನೆ ತುಂಬಾ ಅನುಕೂಲವಾಗಲಿದೆ ಎಂದು ಶ್ರೀಹರ್ಷ ತಿಳಿಸಿದ್ದಾರೆ.