ಉಳ್ಳಾಲ(ದಕ್ಷಿಣ ಕನ್ನಡ) : ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕವಾಗಿರುವ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಜೆನೆಸಿಸ್-ಫರ್ಟಿಲಿಟಿ ಕ್ಲಿನಿಕ್ಅನ್ನು ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ಸಂತಾನ ನಿರೀಕ್ಷೆಯಲ್ಲಿರುವ ದಂಪತಿಗಳಿಗೆ ಜೆನೆಸಿಸ್ ಫರ್ಟಿಲಿಟಿ ಕ್ಲಿನಿಕ್ ಒಂದು ಆಶಾಕಿರಣವಾಗಿದೆ'. ಇಲ್ಲಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವೈದ್ಯರಾದ ಡಾ.ಅನಿತಾ ಲಫಬಾ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಫ್ರೊಫೆಸರ್ ಡಾ. ಪ್ರೇಮ ಡಿ ಕುನ್ಹ ಅವರು ನಡೆಸಿರುವ ಸಂಶೋಧನೆಯ ಪ್ರಕಾರ ಸಂತಾನ ನಿರೀಕ್ಷೆಯಲ್ಲಿರುವ 65 ರಿಂದ 70 ಪ್ರತಿಶತ ದಂಪತಿಗಳಿಗೆ ಹೋಮಿಯೋಪತಿ ಚಿಕಿತ್ಸೆಯಿಂದ ಸಂತಾನ ಭಾಗ್ಯ ಪ್ರಾಪ್ತಿಯಾಗಿರುತ್ತದೆ. ಪ್ರತೀ ಅರ್ಹ ದಂಪತಿಗಳಿಗೆ ಹೋಮಿಯೋಪತಿ ತಜ್ಞ ವೈದ್ಯರಿಂದ ವ್ಯಕ್ತಿಗತ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದರು.
ಈ ವಿಭಾಗದಲ್ಲಿ ಮಹಿಳೆಯರ ಸಮಸ್ಯೆಗಳಾದ ಪಿಸಿಒಡಿ, ಗರ್ಭಕೋಶದಲ್ಲಿನ ಗೆಡ್ಡೆ, ಬಿಳಿಸೆರಗು, ಅತಿರಕ್ತಸ್ರಾವ, ಎಂಡೋಮೆಟ್ರಿಯೋಸಿಸ್ಗೆ ಉತ್ತಮ ಗುಣಮಟ್ಟದ ಹೋಮಿಯೋಪತಿ ಚಿಕಿತ್ಸೆಯನ್ನು ನೀಡಲಾಗುವುದು. ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವು ಡಾ. ವಿಲ್ಮಾ ಡಿಸೋಜರವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವೈದ್ಯರ ತಂಡವು ಹೊರರೋಗಿ ವಿಭಾಗದಲ್ಲಿ ಬೆಳಗ್ಗೆ 8.45 ರಿಂದ ಸಂಜೆ 4 ರ ವರೆಗೆ ಲಭ್ಯವಿರುತ್ತಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹೋಮಿಯೋಪಥಿ ಚಿಕಿತ್ಸೆ ಯಿಂದ ಫಲಾನುಭವಿಗಳಾಗಿದ್ದ ಸುಮಾರು 40 ದಂಪತಿಗಳು ತಮ್ಮ ಸಂತೋಷ ಹಾಗೂ ಅನುಭವವನ್ನು ಹಂಚಿಕೊಂಡರು.
ಮದುವೆ ಆಗಿ ಹತ್ತು ವರ್ಷಗಳಾದರೂ ಮಕ್ಕಳಾಗದೆ ಕೊರಗಿದ್ದೆ. ವೈದ್ಯರನ್ನು ಭೇಟಿಯಾಗಿ ಹಲವಾರು ಆಯುರ್ವೇದಿಕ್ ಹಾಗೂ ಇತರ ಇಂಗ್ಲಿಷ್ ಮದ್ದು ಪಡೆದರು ಪ್ರಯೋಜನವಾಗಿರಲಿಲ್ಲ. ಬಳಿಕ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿ ಹೋಮಿಯೋಪತಿ ಚಿಕಿತ್ಸೆ ಪಡೆದ ಬಳಿಕ ಮಕ್ಕಳನ್ನು ಪಡೆದುಕೊಂಡು ಜೀವನದಲ್ಲಿ ನೆಮ್ಮದಿ ಪಡೆದಿದ್ದೇನೆ. ನನ್ನನ್ನು ತಂಗಿಯಾಗಿ ಆರೈಕೆ ಮಾಡಿದ ಆಸ್ಪತ್ರೆಯ ವೈದ್ಯರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಫಲಾನುಭವಿ ಮುಮ್ತಾಝ್ ತಮ್ಮ ಸಂತೋಷವನ್ನ ಹಂಚಿಕೊಂಡರು.