ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಮಾಣಿ ಜಂಕ್ಷನ್ ನಲ್ಲಿ ಬುಧವಾರ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಈ ಘಟನೆ ಕುರಿತಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬುಧವಾರ ಸಂಜೆ ಭಾರಿ ಚರ್ಚೆಗೆ ಗ್ರಾಸವಾಯಿತು. ಕೆಲವೊಂದು ಸಾಮಾಜಿಕ ಜಾಲತಾಣದಲ್ಲಿ ಮಾರಕಾಸ್ತ್ರ ತಲ್ವಾರ್ಗಳಿಂದ ದಾಳಿ ಎಂಬ ಸುದ್ದಿ ಹರಿದಾಡಿದ್ದು, ಖುದ್ದು ಎಸ್ಪಿ ವಿಕ್ರಮ್ ಆಮ್ಟೆ ಅವರೇ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಬಿಜೆಪಿ ಬಜರಂಗದಳ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಈ ಘರ್ಷಣೆ ನಡೆದಿದೆ. ವಾಹನ ಡಿಕ್ಕಿ ಹೊಡೆದ ನೆಪದಲ್ಲಿ ಘರ್ಷಣೆ ಶುರುವಾಗಿತ್ತು ಎನ್ನಲಾಗಿದೆ. ಈ ಕುರಿತಾಗಿ ಕೂಲಂಕಷವಾಗಿ ತನಿಖೆ ನಡೆಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ಗುಂಪು ಘರ್ಷಣೆಯಲ್ಲಿ ಕಟ್ಟಿಗೆಯಿಂದ ಹಲ್ಲೆ: ಈ ದಿನ ಮಧ್ಯಾಹ ಮಾಣಿ ಜಂಕ್ಷನ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು ಕಟ್ಟಿಗೆಯಿಂದ ಹಲ್ಲೆ ಮಾಡಲಾಗಿದೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಲ್ವಾರ್ನಿಂದ ಹಲ್ಲೆ ಅಂತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಕಟ್ಟಿಗೆಯಿಂದ ಹಲ್ಲೆ ನಡೆಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಈ ಘಟನೆಯಲ್ಲಿ ಹಲ್ಲೆಗೊಳಗಾದ ಪೆರಾಜೆ ಬಜರಂಗದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಅವರಿಗೆ ಕಾಲು ಮತ್ತು ತಲೆಯ ಭಾಗಕ್ಕೆ ಗಾಯಗಳಾಗಿವೆ. ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರ ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿದೆ.
ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ಹಲ್ಲೆಗೆ ಯತ್ನ:
ವಿಜಯಪುರ: ಇನ್ನು ವಿಜಯಪುರದಲ್ಲಿ ಉದ್ಯಮಿ ಮೇಲೆ ಹಲ್ಲೆ ಯತ್ನ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಬಸವನಬಾಗೇವಾಡಿ ಪಟ್ಟಣದ ಹೊರವಲಯದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಗಂಗುಸಿಂಗ್ ರಜಪೂತ ಎಂಬ ವ್ಯಕ್ತಿ ಮೇಲೆ ಹಲ್ಲೆಗೆ ಯೋಜನೆ ರೂಪಿಸಿದ್ದ ಇಬ್ಬರು ದುಷ್ಕರ್ಮಿಗಳು ಪಲ್ಸರ್ ಬೈಕ್ ಮೇಲೆ ಹೆಲ್ಮೆಟ್ ಹಾಕಿಕೊಂಡು ಬಂದು ಅವನ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಆದರೆ, ಉದ್ಯಮಿ ಗಂಗುಸಿಂಗ್ ರಜಪೂತ ಕಾರಿನಲ್ಲಿ ಇರಲಿಲ್ಲ. ಅವರು ಬಾಗೇವಾಡಿ ಪಟ್ಟಣದ ಹೊರವಲಯದ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು.
ಆದರೆ ಕಾರಿನಲ್ಲಿ ವ್ಯಕ್ತಿಯೊಬ್ಬ ಕುಳಿತಿರುವ ಕಾರಣ ಆತನೇ ಗಂಗುಸಿಂಗ್ ರಜಪೂತ ಎಂದು ತಿಳಿದು ಕಾರಿನ ಗ್ಲಾಸ್ ಒಡೆದು ಹಲ್ಲೆಗೆ ಯತ್ನಿಸಿದ್ದಾರೆ. ನಂತರ ಕಾರಿನಲ್ಲಿದ್ದವನು ಆತ ಅಲ್ಲ ಎಂದು ತಿಳಿದು ದೇವಸ್ಥಾನ ಬಳಿ ಬಂದಿದ್ದಾರೆ.
ಆಂಜನೇಯ ದೇವಸ್ಥಾನದಲ್ಲಿದ್ದ ಗಂಗುಸಿಂಗ ರಜಪೂತ ಇವರು ಬರುತ್ತಿದ್ದಂತೆ ಕಬ್ಬಿನ ಗದ್ದೆಯಲ್ಲಿ ನುಗ್ಗಿದ್ದಾನೆ. ಈ ಘಟನೆ ನೋಡುತ್ತಿದ್ದ ಜನ ತಕ್ಷಣ ದೇವಸ್ಥಾನ ಬಳಿ ಜಮಾವಣೆ ಆಗುತ್ತಿದ್ದಂತೆ ದುರ್ಷ್ಕಮಿಗಳು ಬೈಕ್ ಮೇಲೆ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗಂಗುಸಿಂಗ್ ರಜಪೂತ್ ನೀಡಿರುವ ದೂರಿನಂತೆ ತನಿಖೆ ಆರಂಭಿಸಲಾಗಿದೆ.
ಪ್ಲಾಸ್ಟಿಕ್ ಅಂಗಡಿ ಎದುರು ಸಿಸಿ ಕ್ಯಾಮೆರಾ ಇದ್ದು, ಆರೋಪಿಗಳು ಈ ಕ್ಯಾಮರಾದಲ್ಲಿ ಸೆರೆಯಾಗಿರುವ ಸಂಶಯ ಹಿನ್ನೆಲೆ ಕ್ಯಾಮರಾ ಪರಿಶೀಲನೆಯಲ್ಲಿ ಪೊಲೀಸರು ತೊಡಗಿದ್ದಾರೆ. ಇದು ರಿಯಲ್ ಎಸ್ಟೇಟ್ ವ್ಯವಹಾರದ ಹಿನ್ನೆಲೆ ಈ ರೀತಿ ದಾಳಿಗೆ ಯತ್ನ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.