ಮಂಗಳೂರು/ಹುಬ್ಬಳ್ಳಿ: ದಿನೇ ದಿನೆ ಏರಿಕೆ ಕಂಡ ಇಂಧನ ಬೆಲೆ ಸಾಮಾನ್ಯ ಜನರ ಮೇಲೆ ಭಾರಿ ಪರಿಣಾಮ ಬೀರಿದೆ. ಕೊರೊನಾದಿಂದ ಕಂಗೆಟ್ಟವರ ಜೇಬಿಗೆ ಕತ್ತರಿ ಹಾಕಿದೆ. ಇದಕ್ಕೆ ಫುಡ್ ಡೆಲಿವರಿ ಬಾಯ್ಸ್ ಕೂಡ ಹೊರತಾಗಿಲ್ಲ. ತಮ್ಮ ಸ್ವಂತ ಸ್ಕೂಟರ್, ಬೈಕ್ ಮೂಲಕ ಮನೆ-ಮನೆಗೆ ತೆರಳಿ ತಮ್ಮ ಸೇವೆ ಒದಗಿಸುತ್ತಿರುವ ಅವರ ಜೀವನವೀಗ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ.
ಮಂಗಳೂರಿನಲ್ಲಿ ಸುಮಾರು 200 ಫುಡ್ ಡೆಲಿವರಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಒಂದು ದಿನಕ್ಕೆ ಇವರು ಗಳಿಸುವ ಸರಾಸರಿ ಆದಾಯ ಸರಾಸರಿ 400 ರೂ. ಆದರೆ ತೈಲ ಬೆಲೆ ಏರಿಕೆಯಿಂದ ಆದಾಯದ ಬಹುಪಾಲನ್ನು ಪೆಟ್ರೋಲ್ಗೆ ಸುರಿಯಬೇಕಾಗಿದೆ ಎಂದು ಸ್ವಿಗ್ಗಿ ಸಿಬ್ಬಂದಿ ತಿಳಿಸಿದ್ದಾರೆ.
ನಾವು ಗಳಿಸುವ ಆದಾಯದಲ್ಲಿ ಅರ್ಧದಷ್ಟು ಹಣವನ್ನು ಪೆಟ್ರೋಲ್ಗೆ ಹಾಕಬೇಕಿದೆ. ಇದರ ಹೊರತು ಗಾಡಿ ನಿರ್ವಹಣೆ ಕೂಡ ನಮ್ಮ ಹಣದಲ್ಲೇ ಆಗಬೇಕಿದೆ. ಇಷ್ಟೆಲ್ಲಾ ಆಗಿ ಉಳಿದ ಬಿಡಿಗಾಸಿನಲ್ಲಿ ಜೀವನ ಸಾಗಿಸೋದು ಬಹಳ ಕಷ್ಟ. ಹಾಗಾಗಿ ಸರ್ಕಾರ ತೈಲ ಬೆಲೆ ಕಡಿತಗೊಳಿಸಿ ನಮ್ಮನ್ನು ಕಾಪಾಡಬೇಕಿದೆ ಎಂದು ಫುಡ್ ಡೆಲಿವರಿ ಬಾಯ್ಸ್ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಎಲ್ಲೆಡೆ ಪೊಲೀಸರು ಇರೋಕಾಗಲ್ಲ.. ಅವರಿಟ್ಟ ಕಣ್ಣುಗಳಿವೆ, ಹುಷಾರು!
ಇಂಧನ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಮೊದಲೇ ಕೊರೊನಾದಿಂದ ಹೇರಲ್ಪಟ್ಟ ಲಾಕ್ಡೌನ್ನಿಂದ ಕಂಗೆಟ್ಟಿದ್ದ ಜನರ ಜೀವನ ನಿರ್ವಹಣೆಗೆ ತೈಲ ಬೆಲೆ ಏರಿಕೆ ಮತ್ತಷ್ಟು ಆಘಾತ ತಂದಿದೆ. ಸರ್ಕಾರ ಕೂಡಲೇ ಇಂಧನ ಬೆಲೆ ಕಡಿತಗೊಳಿಸಬೇಕು ಎಂದು ಫುಡ್ ಡೆಲಿವರಿ ಬಾಯ್ಸ್ ಮನವಿ ಮಾಡಿದ್ದಾರೆ.