ಮಂಗಳೂರು: 1.15 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮುಂಬೈನ ಉದ್ಯಮಿ ಕಳತ್ತೂರು ವಿಶ್ವನಾಥ್ ಶೆಟ್ಟಿಯನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾಗಿರುವ ಉದ್ಯಮಿ ಕಳತ್ತೂರು ವಿಶ್ವನಾಥ್ ಶೆಟ್ಟಿ ಅವರನ್ನು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಆರೋಪಿ ವಿಶ್ವನಾಥ್ ಶೆಟ್ಟಿ ಸಹಚರ ಮುಂಬಯಿ ನಿವಾಸಿ ಕದಂ ಎಂಬಾತನ ಬಂಧನಕ್ಕೆ ಪೊಲೀಸರು ಪ್ರಯತ್ನ ಮುಂದುವರಿಸಿದ್ದಾರೆ.
ಮಂಗಳೂರು ನಗರ ಪೊಲೀಸರ ಒಂದು ತಂಡ ಈಗಾಗಲೇ ಮುಂಬಯಿಗೆ ತೆರಳಿದೆ. ಅಲ್ಲಿನ ಕ್ರೈಂ ಬ್ರಾಂಚ್ ಪೋಲಿಸರ ಸಹಾಯ ಪಡೆದು ಆರೋಪಿ ಬಂಧನಕ್ಕೆ ಯತ್ನಿಸುತ್ತಿದೆ. ಶೀಘ್ರವೆ ಆರೋಪಿ ಕದಂ ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ. ಈ ನಡುವೆ ಬೆಳ್ಳಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಿವಾಸಿ ಅಲ್ತಾಫ್ ಎಂಬವರಿಗೆ ಆರೋಪಿ ಕಳತ್ತೂರು ವಿಶ್ವನಾಥ ಶೆಟ್ಟಿ 15 ಲಕ್ಷ ರೂ.ಗಳನ್ನು ವಂಚಿಸಿದ ಬಗ್ಗೆಯೂ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಕಟ್ಟಡ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೊರೇಷನ್ನ ಆಡಳಿತ ನಿರ್ದೇಶಕ ರೋಹನ್ ಮಂತೆರೋ ಮತ್ತು ತೊಕ್ಕೊಟ್ಟಿನ ಹರ್ಷ ಫೈನಾನ್ಸ್ ಮಾಲೀಕ ಹರೀಶ್ ರವರಿಗೆ ಆರೋಪಿ ವಂಚನೆ ನಡೆಸಿರುವ ಬಗ್ಗೆ ಮಂಗಳೂರು ನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಮುಂಬೈ ಕ್ರೈಂ ಬ್ರಾಂಚ್ ಪೋಲಿಸರ ಸಹಾಯ ಪಡೆದು ಆರೋಪಿ ವಿಶ್ವನಾಥ್ ಶೆಟ್ಟಿ ಚಲನವಲದ ಬಗ್ಗೆ ತೀವ್ರ ನಿಗಾ ಇರಿಸಲಾಗಿತ್ತು. ಮುಂಬೈ ಪೊಲೀಸರು ನೀಡಿದ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಕಳತ್ತೂರು ವಿಶ್ವನಾಥ್ ಶೆಟ್ಟಿ ವಿರುದ್ಧ ಇನ್ನೂ ಕೆಲ ಪ್ರಕರಣಗಳು ದಾಖಲಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಬಿ ಎಸಿಪಿ ಪರಮೇಶ್ವರ್ ಹೆಗಡೆ ನಿರ್ದೇಶನದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಶಾಮ್ ಸುಂದರ್ ಮತ್ತು ಸೆನ್ ವಿಭಾಗದ ಇನ್ಸ್ಪೆಕ್ಟರ್ ಸತೀಶ್ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:ಪಿಎಂಒ ಉಪ ಕಾರ್ಯದರ್ಶಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ನಕಲಿ IAS ಅಧಿಕಾರಿ ಬಂಧನ
ದುಪ್ಪಟ್ಟು ಹಣ ಕೊಡುವುದಾಗಿ 18 ಲಕ್ಷ ರೂ. ಪಂಗನಾಮ: ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ 18 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣವೊಂದು ನಗರದ ಉಪನಗರ ಠಾಣೆಯಲ್ಲಿ ದಾಖಲಾಗಿತ್ತು. ಹೈದರಾಬಾದ್ ಮೂಲದ ರಾಮಕೃಷ್ಣ ಗೋಶಕೊಂಡಾ, ಅಕ್ಕಿಆಲೂರಿನ ಮಾಸೂಮ್ ಎನ್.ಎಂಬುವವರು ಮೋಸ ಮಾಡಿದ್ದಾರೆ ಎಂದು ಇಲ್ಲಿನ ಇಸ್ಲಾಂಪುರ ಪ್ರದೇಶದ ಜುಲಾಮ್ ಮೊಹಿದ್ದೀನ್ ಎಂಬುವರು ದೂರು ನೀಡಿದ್ದರು. ಟ್ರೇಡಿಂಗ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ 45 ದಿನಗಳಲ್ಲಿ 2 ಪಟ್ಟು ಹಣ ಕೊಡುವುದಾಗಿ ನಂಬಿಸಿ, 10 ಲಕ್ಷ ರೂ. ಬ್ಯಾಂಕ್ ಅಕೌಂಟ್ ಹಾಗೂ 8 ಲಕ್ಷ ನಗದು ಪಡೆದು ವಂಚಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಆನ್‌ಲೈನ್ ಸಾಲದ ಹೆಸರಲ್ಲಿ ಬ್ಲ್ಯಾಕ್ ಮೇಲ್: ಮತ್ತೊಂದೆಡೆ ಹುಬ್ಬಳ್ಳಿಯ ಮಂಟೂರ ರಸ್ತೆ ಪ್ರಿಯದರ್ಶಿನಿ ಕಾಲೋನಿಯ ಶಾರುಖ್ ಎಂಬಾತ ಸಾಲ ನಿರಾಕರಿಸಿದರೂ ಕೂಡ ವಂಚಕನೊಬ್ಬ ಆನ್‌ಲೈನ್ ಆ್ಯಪ್ ಮೂಲಕ ಸಾಲ ಕೊಟ್ಟು, ಬಡ್ಡಿ ಸಮೇತ ಮರಳಿಸಬೇಕೆಂದು ಬ್ಲ್ಯಾಕ್ ಮೇಲ್ ಮಾಡಿ ವಿವಿಧ ಯುಪಿಐ ಐಡಿಗಳಿಗೆ 1,40,400ರೂ. ಹಾಕಿಸಿಕೊಂಡು ಮೋಸ ಮಾಡಿದ್ದಾನೆ ಎಂದು ಸಂತ್ರಸ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.