ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದಲ್ಲಿ 12 ಸಾವಿರ ಅಲ್ಪಸಂಖ್ಯಾತ ಮತದಾರರ ಹೆಸರನ್ನು ಡಿಲಿಟ್ ಮಾಡಲಾಗಿದೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ವಿದೇಶಕ್ಕೆ ಹೋದವರನ್ನು, ಕೆಲ ತಿಂಗಳು ಮನೆಯಲ್ಲಿ ಇಲ್ಲದೇ ಇದ್ದವರನ್ನು ಮತದಾರರ ಪಟ್ಟಿಯಿಂದ ಡಿಲಿಟ್ ಮಾಡಲಾಗಿದೆ. ಇದು ಚುನಾವಣಾ ಇಲಾಖೆಯ ತಪ್ಪು ನಿರ್ಧಾರವಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆಗೆ ಬಿ ಎಲ್ ಓ ಗಳನ್ನು ಆದಿತ್ಯವಾರ ಕಳುಹಿಸಲಾಗುವುದು ಎಂದು ಹೇಳಿದ್ದಾರೆ. ಅವರು ಹೇಳಿದ ಪ್ರಕಾರ, ಇನ್ನು ಮೂರು ಆದಿತ್ಯವಾರ ಮಾತ್ರ ಇದೆ. ಡಿಲಿಟ್ ಮಾಡಿರುವುದನ್ನು ಸರಿಪಡಿಸಲು ಇದು ಸಾಕಾಗುವುದಿಲ್ಲ. ಈ ಕಾಲಾವಧಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಬೇಕು ಎಂಬ ವಿಚಾರದಲ್ಲಿ ಗೊಂದಲ ಸೃಷ್ಟಿಸಲಾಗಿದೆ. ಮತದಾರರ ಪರಿಷ್ಕರಣೆಗೆ ಸಂಬಂಧಿಸಿದಂತೆ ಗರುಡ ಆ್ಯಪ್ ಕಾರ್ಯನಿರ್ವಹಣೆ ಬಗ್ಗೆ ಬಿ ಎಲ್ ಓ ಗಳಿಗೆ ಸರಿಯಾದ ಮಾಹಿತಿ ಇಲ್ಲ ಎಂದು ದೂರಿದರು.
ಮತದಾರರ ಪಟ್ಟಿಯಿಂದ ಮತದಾರರನ್ನು ಡಿಲಿಟ್ ಮಾಡಿರುವುದನ್ನ ಸರಿಪಡಿಸದಿದ್ದರೆ ರಾಜ್ಯ ಚುನಾವಣಾ ಆಧಿಕಾರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಓದಿ: 5.86 ಲಕ್ಷ ವಿಶೇಷ ಚೇತನರಿಗೆ ವಿಶಿಷ್ಟ ಗುರುತಿನ ಚೀಟಿ ವಿತರಣೆ: ಸಚಿವ ಡಾ.ಕೆ.ಸುಧಾಕರ್