ನೆಲ್ಯಾಡಿ: ಕೋವಿಡ್-19 ಸೋಂಕಿನಿಂದ ಬಳಲುತ್ತಿರುವರಿಗೆ ಸಹಾಯ ನೀಡಲು ಮತ್ತು ಕೋವಿಡ್ ಸೋಂಕಿನಿಂದ ಮೃತಪಟ್ಟರೆ ಅಂತ್ಯ ಸಂಸ್ಕಾರ ನಡೆಸುವುದಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯದಿಂದ ಸಹೃದಯ ಕೋವಿಡ್ ವಾರಿಯರ್ಸ್ ಎಂಬ ಹೆಸರಿನಲ್ಲಿ ಟಾಸ್ಕ್ ಫೋರ್ಸ್ ತಂಡವನ್ನು ರಚನೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿಗೊಳಪಟ್ಟ ಕೋವಿಡ್ ವಾರಿಯರ್ಸ್ ಸದಸ್ಯರಿಗೆ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ತರಬೇತುದಾರರಾಗಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸೌಮ್ಯ ಅವರು ಕೋವಿಡ್-19 ಸಾಂಕ್ರಾಮಿಕ ರೋಗ ಬಾರದಂತೆ ಮತ್ತು ಹರಡದಂತೆ ಜನರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಹಾಗೂ ಮೃತರ ಅಂತ್ಯ ಕ್ರಿಯೆಯ ವೇಳೆ ಸದಸ್ಯರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತಾಗಿ ಮತ್ತು ಸರ್ಕಾರದ ನಿಯಮಾವಳಿಗಳ ಪ್ರಕಾರ ಪಿಪಿಇ ಕಿಟ್ ಧರಿಸುವಾಗ ಮತ್ತು ಕಳಚುವಾಗ ಗಮನಿಸಬೇಕಾದ ಅಂಶಗಳ ಕುರಿತಂತೆ ಕೋವಿಡ್ ವಾರಿಯರ್ಸ್ ತಂಡದ ಸದಸ್ಯರಿಗೆ ತರಬೇತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಿರೋ ಮಲಬಾರ್ ಕ್ಯಾಥೊಲಿಕ್ ಅಸೋಸಿಯೇಷನ್ ಸಂಘಟನೆಯ ನಿರ್ದೇಶಕರಾದ ರೆವೆರೆಂಡ್ ಡಾ. ಕುರಿಯಕೋಸ್, ಸಂಘದ ಅಧ್ಯಕ್ಷರಾದ ಕೆ.ಕೆ ಸೆಬಾಸ್ಟಿಯನ್, ಸಹೃದಯ ಕೋವಿಡ್ ವಾರಿಯರ್ಸ್ ಚೀಫ್ ಕೊ-ಆರ್ಡಿನೇಟರ್ ಜೋಸ್ ಕೆ.ಜೆ. ಮತ್ತು ಗ್ಲೋಬಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಬಿಟ್ಟಿ ಭಾಗವಹಿಸಿದರು. ಧರ್ಮ ಗುರುಗಳನ್ನು ಒಳಗೊಂಡ ತಂಡದ ಮೂವತ್ತು ಸದಸ್ಯರು ತರಬೇತಿ ಪಡೆದರು.