ಪುತ್ತೂರು : ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಜನತೆಯ ಆಸ್ತಿ ಸಂರಕ್ಷಣೆ ದೃಷ್ಟಿಯಿಂದ ಮಂಗಳೂರು ಮತ್ತು ಪುತ್ತೂರು ತಾಲೂಕಿನಲ್ಲಿ `ಪೌರರಕ್ಷಣಾ ಪಡೆ'ಯನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ. ಮುರಲೀ ಮೋಹನ್ ಚೂಂತಾರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು, ರಾಯಚೂರು ಹಾಗೂ ಕೈಗಾದಲ್ಲಿ ಪೌರ ರಕ್ಷಣಾ ಪಡೆ ಈ ಹಿಂದೆ ನಿಯೋಜನೆ ಮಾಡಲಾಗಿದೆ. ಇದೀಗ ದಕ್ಷಿಣ ಕನ್ನಡ, ಬಳ್ಳಾರಿ, ಧಾರವಾಡ ಮತ್ತು ಬೆಳಗಾವಿಯಲ್ಲೂ ರಚನೆಗೆ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಗೃಹ ರಕ್ಷಕದಳದ ಪೌರ ರಕ್ಷಣಾ ನಿರ್ದೇಶಕರು ಆದೇಶ ಮಾಡಿದ್ದಾರೆ. ಆ ಪ್ರಕಾರ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಕನಿಷ್ಟ 1,112 ಮಂದಿಯ ಪೌರ ರಕ್ಷಣಾ ಪಡೆಗಳ ರಚನೆಗೆ ಮುನ್ನುಡಿ ಬರೆಯಲಾಗಿದೆ ಎಂದು ತಿಳಿಸಿದರು.
1968 ರಲ್ಲಿ ಅಸ್ತಿತ್ವಕ್ಕೆ ಬಂದ ಪೌರ ರಕ್ಷಣಾ ಪಡೆ ಸೇನೆಯ ಜೊತೆಯೂ ಕಾರ್ಯ ನಿರ್ವಹಿಸಿತ್ತು. 2010 ರಿಂದ ಅದನ್ನು ವಿಪತ್ತು ನಿರ್ವಹಣೆ ಘಟಕದ ಜೊತೆ ಸೇರಿಸಲಾಗಿತ್ತು. ದೇಶದ ಒಟ್ಟು ಜನಸಂಖ್ಯೆಯ ಶೇ.1 ರಷ್ಟು ಪೌರ ರಕ್ಷಣಾ ಕಾರ್ಯಕರ್ತರು ಇರಬೇಕು ಎಂಬುವುದು ನಿಯಮವಾಗಿದೆ ಎಂದು ತಿಳಿಸಿದ ಅವರು, ಮಂಗಳೂರಿನಲ್ಲಿ 40 ಮಂದಿಯ ತಂಡ ರಚನೆಯಾಗಿದೆ. ಪುತ್ತೂರಿನಲ್ಲಿ ಶುಕ್ರವಾರ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉದ್ಘಾಟನೆಗೊಂಡಿದೆ. ಈಗಾಗಲೇ 35 ಮಂದಿ ಪೌರ ರಕ್ಷಣಾ ಪಡೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಿಗೆ ತರಬೇತಿಯೂ ಪ್ರಾರಂಭವಾಗಿದೆ ಎಂದು ತಿಳಿಸಿದರು.
18 ವರ್ಷದಿಂದ ಮೇಲ್ಪಟ್ಟ 50 ವರ್ಷ ಮೀರದ ಪುರುಷ ಹಾಗೂ ಮಹಿಳೆಯರು ಈ ಪೌರ ರಕ್ಷಣಾ ಪಡೆಯಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಪೌರ ರಕ್ಷಣಾ ಪಡೆಯ ಕಾರ್ಯಕರ್ತರಿಗೆ ಯಾವುದೇ ರೀತಿಯ ಸಂಭಾವನೆ-ಗೌರವ ಧನ ಇಲ್ಲ. ಹಳದಿ ಬಣ್ಣದ ಜಾಕೆಟ್ ಮತ್ತು ಗುರುತು ಪತ್ರವನ್ನು ಮಾತ್ರ ಪೌರ ರಕ್ಷಣಾ ಕಾರ್ಯಕರ್ತರಿಗೆ ನೀಡಲಾಗುವುದು. ಸ್ವಯಂ ಸ್ಪೂರ್ತಿಯಿಂದ ಈ ತಂಡದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಆಸ್ಕರ್ ಆನಂದ್ ಮತ್ತು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮಹಾದೇವ ಶಾಸ್ತ್ರಿ ಇದ್ದರು.