ಮಂಗಳೂರು: ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ನಡೆಸಿ, ಮಗು ಕರುಣಿಸಿದ ಹಿನ್ನೆಲೆ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗೆ ಶಿಕ್ಷೆ ವಿಧಿಸಿದೆ.
ಕೆಮ್ರಾಲ್ ಅತ್ತೂರು ಗ್ರಾಮದ ಪಡುಬಳಿಕೆ ನಿವಾಸಿ ಅಜಿತ್ ಶೆಟ್ಟಿಗೆ (27) ಶಿಕ್ಷೆಗೊಳಗಾದ ಆರೋಪಿ. 10 ವರ್ಷ ಕಠಿಣ ಶಿಕ್ಷೆ ಹಾಗೂ 70 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಐಪಿಸಿ ಸೆಕ್ಷನ್ 376 (2N) ನಿರಂತರ ಅತ್ಯಾಚಾರಕ್ಕೆ 10 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ದಂಡ. ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಸೆಕ್ಷನ್ 417 ವಂಚನೆ ಪ್ರಕರಣಕ್ಕೆ ಒಂದು ವರ್ಷ ಜೈಲು ಹಾಗೂ 20 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು. ದಂಡದಲ್ಲಿ 50 ಸಾವಿರ ರೂ. ಸಂತ್ರಸ್ತ ಯುವತಿಗೆ ನೀಡಬೇಕು. ಅಲ್ಲದೆ ಹೆಚ್ಚುವರಿ ಒಂದು ಲಕ್ಷ ರೂ. ಪರಿಹಾರ ಮೊತ್ತವನ್ನು ಮಗುವಿಗೆ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಯುವತಿಯ ಸ್ನೇಹಿತೆಯ ಮುಖಾಂತರ ಅಪರಾಧಿ ಹಿಟಾಚಿ ಚಾಲಕ ಅಜಿತ್ ಶೆಟ್ಟಿ ಪರಿಚಯವಾಗಿದ್ದಾನೆ. ಪರಿಚಯ ಪ್ರೀತಿಗೆ ತಿರುಗಿ ಐದು ವರ್ಷಗಳ ಕಾಲ ಮುಂದುವರಿದಿದೆ. 2014 ಸೆಪ್ಟೆಂಬರ್ 14ರಂದು ಮಧ್ಯಾಹ್ನದ ವೇಳೆ ಯುವತಿಯ ಮನೆಗೆ ಬಂದ ಅಜಿತ್ ಶೆಟ್ಟಿ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಗೈದಿದ್ದಾನೆ. ಆ ಬಳಿಕ ಇದೇ ರೀತಿ ನಿರಂತರ ಅತ್ಯಾಚಾರ ಮಾಡಿದ್ದಾನೆ. ಪರಿಣಾಮ 2015 ಮೇ 29ರಂದು ಯುವತಿ ಗರ್ಭಿಣಿ ಯಾಗಿ ಮೂಡುಬಿದಿರೆ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಯುವತಿಗೆ ಹೆರಿಗೆಯಾದ ಬಳಿಕ ಅಜಿತ್ ಶೆಟ್ಟಿ ಆಸ್ಪತ್ರೆಗೆ ಬಾರದೆ ನಾಪತ್ತೆಯಾಗಿದ್ದ. ಇದರಿಂದ ನೊಂದ ಯುವತಿ ಆತನ ವಿರುದ್ಧ 2015 ಜುಲೈ 22ರಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಅಂದಿನ ಬಜ್ಪೆ ಪೊಲೀಸ್ ಠಾಣಾ ಅಧಿಕಾರಿ ಟಿ.ಡಿ. ನಾಗರಾಜ್ ಅವರು ಅಜಿತ್ ಶೆಟ್ಟಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡ 6ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ವಿಚಾರಣೆ ನಡೆಸಿದೆ. ಮಗುವಿನ ಡಿಎನ್ಎ ವರದಿಯ ಆಧಾರದಂತೆ ಮಗುವಿನ ಜೈವಿಕ ತಂದೆ ಅಜಿತ್ ಶೆಟ್ಟಿ ಎಂದು ಸಾಬೀತಾಗಿತ್ತು. ವಾದ ಪ್ರತಿವಾದವನ್ನು ಆಲಿಸಿ, ಸಾಕ್ಷಿ, ದಾಖಲೆಗಳನ್ನು ಪರಿಶೀಲಿಸಿ ಅಜಿತ್ ಶೆಟ್ಟಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಸೈದುನ್ನಿಸಾ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಜುಡಿತ್ ಒ.ಎಂ. ಕ್ರಾಸ್ತ ವಾದ ಮಂಡಿಸಿದ್ದರು
.