ಮಂಗಳೂರು: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, ಐದು ಲಕ್ಷ ರೂ. ವೌಲ್ಯದ ಏಳು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸುರತ್ಕಲ್ 3ನೇ ಬ್ಲಾಕ್‌ನ ಜನತಾ ಕಾಲೋನಿಯ ವಿಜಯ ಬೋವಿ (23), ಮುಲ್ಕಿ ಅಶ್ವತ್ಥಕಟ್ಟೆಯ ಅಭಿಜಿತ್ ಬಂಗೇರಾ (26), ಉಳಾಯಿಬೆಟ್ಟು ನಿವಾಸಿ ಪ್ರದೀಪ್ ಪೂಜಾರಿ (27), ಕಾಟಿಪಳ್ಳ ಕೃಷ್ಣಾಪುರ 5ನೇ ಬ್ಲಾಕ್‌ನ ರಕ್ಷಿತ್ ಕುಲಾಲ್ (22), ಬಂಟ್ವಾಳದ ಹೂಹಾಕುವಕಲ್ಲು ನಿವಾಸಿ ಸುದೀಶ್ ನಾಯರ್ (20) ಬಂಧಿತ ಆರೋಪಿಗಳು.
ಆ.6 ರಂದು ಸಂಜೆ ಬಜ್ಪೆ ಠಾಣಾಧಿಕಾರಿ ಮತ್ತು ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಎರಡು ಬೈಕ್‌ಗಳಲ್ಲಿ ಬರುತ್ತಿದ್ದ ನಾಲ್ವರನ್ನು ತಡೆದು ನಿಲ್ಲಿಸಿ, ವಿಚಾರಿಸಿದಾಗ ಬೈಕ್ ಕಳವು ವಿಷಯ ಬೆಳಕಿಗೆ ಬಂದಿದೆ.
ಬಜ್ಪೆ ಠಾಣಾ ವ್ಯಾಪ್ತಿಯ ಬ್ಯಾಂಕ್‌ವೊಂದರ ಬಳಿ ಬಜಾಜ್ ಡಿಸ್ಕವರಿ ಬೈಕ್, ಈಶ್ವರ ಕಟ್ಟೆಯಿಂದ ಪಲ್ಸರ್, ಎಡಪದವಿನಿಂದ ಪಲ್ಸರ್ 150, ಯಮಹಾ ಎಫ್ ಝೆಡ್, ಕಾವೂರು ಠಾಣಾ ವ್ಯಾಪ್ತಿಯ ಪಂಜಿಮೊಗರಿನಿಂದ ಪಲ್ಸರ್ 150, ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯಿಂದ ಆಕ್ಟೀವ್ ಸ್ಕೂಟರ್ ಅನ್ನು ಕಳವು ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಜೊತೆಗೆ ಮೂಡಿಬಿದಿರೆ ಪೇಟೆಯ ದೇವಸ್ಥಾನವೊಂದರ ಎದುರಿನ ಚಿನ್ನದಂಗಡಿಯಲ್ಲಿ ದರೋಡೆ ಮಾಡಲು ಸಂಚು ರೂಪಿಸಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.