ಮಂಗಳೂರು: ಮುಲ್ಕಿಯ ಹಳೆಯಂಗಡಿ ಸಮೀಪದ ಪಾವಂಜೆಯ ಖಂಡಿಗೆ ಧರ್ಮರಸು ಉಳ್ಳಾಯ ದೈವಸ್ಥಾನದ ನಂದಿನಿ ನದಿಯಲ್ಲಿ ಭಕ್ತರು ಮೀನು ಹಿಡಿದು ಸಂಭ್ರಮಪಟ್ಟರು.
ಚೇಳ್ಯಾರು ಗ್ರಾಮದ ಖಂಡಿಗೆ ಧರ್ಮರಸು ದೈವವು ನಂದಿನಿ ನದಿಯ ತಟದಲ್ಲಿ ಅರಸು ಉಳ್ಳಾಯ ದೈವವಾಗಿ ನೆಲೆ ನಿಲ್ಲುತ್ತದೆ. ಇಲ್ಲಿಗೆ ಸಮೀಪದ ನಂದಿನಿ ನದಿಯಲ್ಲಿ ಉಳ್ಳಾಯ ದೈವದ ನೇಮದ ನಿಮಿತ್ತ ವರ್ಷಕ್ಕೊಂದು ಬಾರಿ ಮಾತ್ರ ಮೀನು ಹಿಡಿಯುವ ಅವಕಾಶವಿರುತ್ತದೆ. ಬೇರೆ ದಿನಗಳಲ್ಲಿ ಇಲ್ಲಿ ಮೀನು ಹಿಡಿಯಲು ಅವಕಾಶವಿಲ್ಲ. ಈ ಮೂಲಕ ಇಲ್ಲಿ ಭಕ್ತರು ಜಾತಿ ಬೇಧ ಮರೆತು ಭಕ್ತರು ಮೀನು ಹಿಡಿಯುತ್ತಾರೆ.
ಈ ರೀತಿಯಲ್ಲಿ ಹಿಡಿದ ಮೀನುಗಳನ್ನು ಅಲ್ಲಿಯೇ ಮಾರಾಟ ಮಾಡಲಾಗುತ್ತದೆ. ದೈವದ ಹೆಸರಿನಲ್ಲಿ ಪ್ರಸಾದ ರೂಪದಲ್ಲಿ ಮೀನುಗಳನ್ನು ಖರೀದಿಸುವ ಮಂದಿ ಮಧ್ಯಾಹ್ನಕ್ಕೆ ಅದೇ ಮೀನಿನ ಸಾರು, ಫ್ರೈ ಮಾಡಿ ಸಂಭ್ರಮದಿಂದ ಭೋಜನ ಮಾಡುತ್ತಾರೆ. ತುಳುನಾಡಿನಲ್ಲಿ ಎರ್ಮಾಳ್ ಜಪ್ಪು ಖಂಡೇವು ಅಡೆಪ್ಪು ಎಂಬ ಗಾದೆ ಪ್ರಚಲಿತದಲ್ಲಿದೆ. ಅಂದರೆ ಕರಾವಳಿಯಲ್ಲಿ ವರ್ಷಾವಧಿ ಜಾತ್ರೆಗಳಲ್ಲಿ ಎರ್ಮಾಳಿನಲ್ಲಿ ಆರಂಭಗೊಂಡರೆ, ಖಂಡೇವು ಜಾತ್ರೆಯ ಮೂಲಕ ಅಂತ್ಯಗೊಳ್ಳುತ್ತದೆ.
ಇಂದು ರಾತ್ರಿ ಖಂಡೇವಿನಲ್ಲಿ ಧ್ವಜಾವರೋಹಣ ಆಗಲಿದೆ. ಈ ಮೂಲಕ ಈ ವರ್ಷದ ಜಾತ್ರೆ, ಉತ್ಸವ, ಆಯನಾದಿಗಳು ತುಳುನಾಡಿನಲ್ಲಿ ಅಂತ್ಯಗೊಳ್ಳುತ್ತದೆ. ಮುಂದೆ ಶ್ರಾವಣದ ಬಳಿಕವೇ ಎಲ್ಲೆಡೆ ಜಾತ್ರೋತ್ಸವ, ನೇಮ, ಉತ್ಸವಾದಿಗಳು ಆರಂಭಗೊಳ್ಳುತ್ತದೆ.
ಇದನ್ನೂ ಓದಿ: ಕಾರವಾರದಲ್ಲಿ ಮೀನು ಹಿಡಿಯೋ ಆಟ: ಗೋವಾದಿಂದ ನೋಡಲು ಜನ!