ಮಂಗಳೂರು: ದೇಶದ ಪ್ರಧಾನಿಯವರ ಬಗ್ಗೆ ಪ್ರಶ್ನೆ ಮಾಡಿದರೆ ಅದು ದೇಶ ವಿರೋಧಿ, ಸಂವಿಧಾನ ವಿರೋಧಿಯಾಗುತ್ತದೆ. ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಜನಸಾಮಾನ್ಯರು ನೀಡಿದ ಹಣದ ಬಗ್ಗೆ ವಿಚಾರಿಸುವ ಹಕ್ಕು ಸಂವಿಧಾನ ಬದ್ಧವಾಗಿ ನೀಡಲಾಗಿದೆ. ಇದನ್ನು ಪ್ರಶ್ನಿಸಿದ ಸೋನಿಯಾ ಗಾಂಧಿ ಅವರ ವಿರುದ್ಧ ದೂರು ದಾಖಲಿಸಿದ್ದು ರಾಜಕೀಯ ದ್ವೇಷಕ್ಕಾಗಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದರು.
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಣ ಖಾಸಗಿ ಆಸ್ತಿಯಲ್ಲ, ಅದು ದೇಶದ ಆಸ್ತಿ. ರಾಜ್ಯದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿ ಇರೋವಾಗ ಮತ್ತೆ ಎಲ್ಲಾ ರಾಜ್ಯಗಳಲ್ಲೂ ಪಿಎಂ ಕೇರ್ಸ್ ಫಂಡ್ ಸಂಗ್ರಹ ಮಾಡುವ ಅವಶ್ಯಕತೆ ಏನಿದೆ? ಈ ಹಣವನ್ನು ಲೆಕ್ಕ ಹಾಕುವವರಿಲ್ಲ. ಅದರ ಬಗ್ಗೆ ಪ್ರಶ್ನಿಸುವಂತೆಯೂ ಇಲ್ಲ ಎಂಬ ನಡೆ ಸಂವಿಧಾನ ವಿರೋಧಿಯಾಗಿದೆ ಎಂದರು.
ಯಾರೋ ಓರ್ವ ಈ ಬಗ್ಗೆ ದೂರು ದಾಖಲಿಸಬಹುದು. ಆದರೆ, ಪೊಲೀಸರು ಎಫ್ಐಆರ್ ದಾಖಲಿಸಬೇಕಾದರೆ ಕ್ರಮಬದ್ಧವಾಗಿದೆಯೋ ಇಲ್ಲವೋ ಎಂದು ಪರಿಶೀಲನೆ ನಡೆಸಬೇಕಿತ್ತು. ಆದ್ದರಿಂದ ಸರ್ಕಾರ ಇದರಲ್ಲಿ ನೇರವಾಗಿ ಭಾಗಿ ಆಗಿರುವುದು ಕಂಡು ಬರುತ್ತದೆ. ರಾಜ್ಯದ ಸಿಎಂ, ಗೃಹಮಂತ್ರಿ ಹಾಗೂ ಪೊಲೀಸ್ ಇಲಾಖೆ ಸೇರಿಕೊಂಡು ಧ್ವನಿ ಎತ್ತಿದವರನ್ನು ದಮನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಈ ಬಗ್ಗೆ ಕಾಂಗ್ರೆಸ್ ಸುಮ್ಮನಿರೋದಿಲ್ಲ. ಇದರ ವಿರುದ್ಧ ಖಂಡಿತಾ ಹೋರಾಡುತ್ತದೆ. ಕರ್ನಾಟಕ ಸರ್ಕಾರ ಪದೇ ಪದೇ ಕಾಂಗ್ರೆಸ್ ನಾಯಕರ ಮೇಲೆ ಪ್ರಕರಣ ದಾಖಲಿಸಿ ಅದಕ್ಕೆ ಪ್ರಚಾರ ತೆಗೆದುಕೊಳ್ಳುತ್ತಿದೆ. ಎಫ್ಐಆರ್ ದಾಖಲಿಸಿರುವ ಪೊಲೀಸ್ ಅಧಿಕಾರಿಯ ವಿರುದ್ಧ ದೂರು ದಾಖಲಿಸಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ ಎಂದರು.
ರಾಜ್ಯ ಸರ್ಕಾರ ಖಾಸಗಿ ಬಸ್ಗಳು ರಸ್ತೆಗಿಳಿಯಲಿವೆ ಎಂದು ಹೇಳಿದ್ದರೂ ಇಳಿಸಲು ಸಾಧ್ಯವಾಗಿಲ್ಲ. ಇದು ಸರ್ಕಾರದ ವಿಫಲತೆಗೆ ಸಾಕ್ಷಿ. ಬಸ್ ಮಾಲೀಕರು ರಾಜ್ಯದ ಆದೇಶದ ವಿರುದ್ಧ ಸಿಡಿದು ನಿಂತಿದ್ದಾರೆ. ಅವರು ಕೇಳಿದ ಆರು ತಿಂಗಳ ತೆರಿಗೆ ವಿನಾಯಿತಿ ನೀಡಲು ನಿಮಗೆ ಸಾಧ್ಯವಾಗಿಲ್ಲ. ಸಂಸದರು, ಉಸ್ತುವಾರಿ ಸಚಿವರು ಹಾಗೂ ಬಿಜೆಪಿ ಶಾಸಕರು ಯಾರಿಗೂ ಬಸ್ ಮಾಲೀಕರ ಬೇಡಿಕೆ ಈಡೇರಿಸಲು ಆಗಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ 50 ಜನ ಸಂಚರಿಸುವ ಬಸ್ನಲ್ಲಿ 25 ಜನ ಸಂಚರಿಸಲು ಅವಕಾಶ ನೀಡಿದ್ದಾರೆ. ಆದರೆ, ತೆರಿಗೆ 50 ಜನರದ್ದೂ ಕಟ್ಟಬೇಕು. ಇದು ಯಾವ ನ್ಯಾಯ ಎಂದು ಟೀಕಿಸಿದರು.