ಬೆಳ್ತಂಗಡಿ: ಸರ್ಕಾರದ ನೀತಿಗಳನ್ನು ಪ್ರಶ್ನಿಸುವವರ ವಿರುದ್ಧ ಎಫ್ಐಆರ್ ಹಾಕಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಪ್ರಸ್ತುತ ಇರುವ ಸದಸ್ಯರನ್ನೇ ಮುಂದುವರಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಮತ್ತು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಂ ಕೇರ್ನ ಹಣ ದುರುಪಯೋಗ ಆಗಿದೆ ಎಂದು ಹೇಳಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೊಂದು ಕೆಟ್ಟ ಸಾಂಪ್ರದಾಯಕ್ಕೆ ನಾಂದಿ ಹಾಡಿದೆ. ಸೋನಿಯಾ ಗಾಂಧಿಯವರು ಇಟಲಿಯಿಂದ ಬಂದವರಾದರು ಭಾರತದ ಸಂಸ್ಕೃತಿ ಅಳವಡಿಸಿಕೊಂಡ ಧೀರ ಮಹಿಳೆ. ಅವರ ದೇಶ ಭಕ್ತಿ ದೇಶದ ನಾಗರಿಕರಿಗಿಂತ ಕಡಿಮೆ ಇಲ್ಲ. ಈ ರೀತಿಯ ಎಫ್ಐಆರ್ ಹಾಕುವುದಾದರೆ ಬಿಜೆಪಿಯವರ ಒಬ್ಬೊಬ್ಬರ ಮೇಲೆ ಸಾವಿರ ಎಫ್ಐಆರ್ ಹಾಕಬಹುದು. ಅದನ್ನು ಕೂಡಲೇ ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಆಡಳಿತಾವಧಿ ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಪ್ರಸ್ತುತ ಸದಸ್ಯರನ್ನೇ ಮುಂದುವರಿಸಬೇಕು ಅಥವಾ ಆಡಳಿತಾಧಿಕಾರಿಯ ನೇಮಕ ಮಾಡಬೇಕು. ಸಲಹಾ ಸಮಿತಿಯ ಹೆಸರಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತರ ನೇಮಕಕ್ಕೆ ವಿರೋಧವಿದೆ. ಹಾಗೇನಾದರೂ ಮಾಡಿದ್ದಲ್ಲಿ ಪ್ರತಿ ಗ್ರಾ.ಪಂ ನ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಕೋವಿಡ್-19 ನಿಂದಾಗಿ ಅರ್ಥ ವ್ಯವಸ್ಥೆ ಹದಗೆಟ್ಟಿದೆ. ಖಾಸಗಿ ಬಸ್ ಮಾಲೀಕರಿಗೆ ಆರ್ಥಿಕ ನಷ್ಟ ಭರಿಸಲು ಆರು ತಿಂಗಳ ರೋಡ್ ಟ್ಯಾಕ್ಸ್ ಹಾಗೂ ಇನ್ಸೂರೆನ್ಸ್ ಮನ್ನಾ ಮಾಡಬೇಕು. ಸಿಬ್ಬಂದಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗಿದ್ದು, ಪ್ರತಿ ತಾಲೂಕಿನಲ್ಲಿ ಕೋವಿಡ್ ಟೆಸ್ಟ್ ಘಟಕ ತೆರೆಯಬೇಕು. ಪ್ರತಿಯೊಬ್ಬರ ತಪಾಸಣೆ ಆಗಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಬೆಳ್ತಂಗಡಿ ಗ್ರಾಮೀಣ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಜನ್.ಜಿ.ಗೌಡ ಮತ್ತು ಶೈಲೇಶ್ ಕುಮಾರ್, ಎಸ್ಸಿ ಘಟಕದ ಅಧ್ಯಕ್ಷ ವಸಂತ ಬಿ.ಕೆ, ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಉಪಸ್ಥಿತರಿದ್ದರು.