ಪುತ್ತೂರು: ಸಾಧನೆಯ ಬೆನ್ನು ಹತ್ತಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರಿಗೆ ಸಿಕ್ಕಿರುವ ಪ್ರಶಸ್ತಿ ಮರಾಠಿ ಹಾಗೂ ಕೃಷಿಕ ಸಮಾಜಕ್ಕೆ ನೀಡಿದ ಗೌರವ. ಈ ನಿಟ್ಟಿನಲ್ಲಿ ಅವರು ಮುಂದಿನ ಪೀಳಿಗೆಗೆ ಸಾಧನೆಯ ಕುರಿತ ಜೀವಂತ ಪುಸ್ತಕ ಆಗಿ ಹೊರಹೊಮ್ಮಲಿ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಭಾನುವಾರ ಕೊಂಬೆಟ್ಟು ಮರಾಠಿ ಸಮಾಜ ಮಂದಿರದಲ್ಲಿ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ಅಮೈ ಪದ್ಮಶ್ರೀ ಮಹಾಲಿಂಗ ನಾಯ್ಕರಿಗೆ ಆಯೋಜಿಸಿದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾಯಕಯೋಗಿ, ಬುಡಕಟ್ಟು ಜನಾಂಗವನ್ನು ಗುರುತಿಸಿ ಈ ಜನಾಂಗದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮೂಲಕ ಮರಾಠಿ ಸಮುದಾಯದ ಮಹಾಲಿಂಗ ನಾಯ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಕೆಲಸವನ್ನು ಪ್ರಧಾನಿಯವರು ಮಾಡಿದ್ದಾರೆ. ಸರ್ಕಾರದ ಸವಲತ್ತು, ತನ್ನಲ್ಲಿರುವ ಚೈತನ್ಯ ಇವೆರಡನ್ನು ಒಟ್ಟುಗೂಡಿಸಿ ಸಾಧನೆ ಮಾಡಿ ಮತ್ತಷ್ಟು ಸಾಧಕರು ಸಮಾಜದಲ್ಲಿ ಹುಟ್ಟಿಬರಬೇಕು ಎಂಬ ಸಂದೇಶವನ್ನು ಅಮೈ ಮಹಾಲಿಂಗ ನಾಯ್ಕರು ಸಮಾಜಕ್ಕೆ ನೀಡಿದ್ದಾರೆ ಎಂದು ಬಣ್ಣಿಸಿದರು.
ಶಾಸಕ ಸಂಜೀವ ಮಠಂದೂರು ಮಹಾಲಿಂಗ ನಾಯ್ಕರಿಗೆ ಪೇಟ ತೊಡಿಸಿ ಸನ್ಮಾನಪತ್ರ, ಶ್ರೀ ಮಹಾಲಿಂಗೇಶ್ವರ ದೇವರ ಬೆಳ್ಳಿಯ ಮೂರ್ತಿ, ಫಲಪುಷ್ಪ, ನಗದು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಹಾಲಿಂಗ ನಾಯ್ಕ ಪತ್ನಿ ಲಲಿತಾ ಜತೆಗಿದ್ದರು.
ಬಳಿಕ ತಾಲೂಕು ಮರಾಠಿ ಸಮುದಾಯದ ಪದಾಧಿಕಾರಿಗಳು, ಗ್ರಾಮೀಣ ಸಮಿತಿ, ಭಜನಾ ಸಮಿತಿ ಸೇರಿದಂತೆ ಇನ್ನಿತರ ಸಮಾಜದ ಸಂಘ ಸಂಸ್ಥೆಗಳು ಮಹಾಲಿಂಗ ನಾಯ್ಕರನ್ನು ಗೌರವಿಸಿದವು.
ಕಾರ್ಯಕ್ರಮದ ಮೊದಲು ಪದ್ಮಶ್ರೀ ಮಹಾಲಿಂಗ ನಾಯ್ಕ ಅವರನ್ನು ದರ್ಬೆ ವೃತ್ತದ ಬಳಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಚೆಂಡೆ, ಚಾಮರ, ಛತ್ರಿ, ನಾಸಿಕ್ ಬ್ಯಾಂಡ್‌ನೊಂದಿಗೆ ಸಭಾಭವನಕ್ಕೆ ಕರೆತರಲಾಯಿತು. ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಶಕುಂತಲಾ ಟಿ. ಶೆಟ್ಟಿ, ಸಮಾರಂಭದ ಅಧ್ಯಕ್ಷತೆ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಪ್ಪ ನಾಯ್ಕ ಎಸ್, ಸನ್ಮಾನ ಸಮಿತಿ ಸಂಚಾಲಕ ಮಂಜುನಾಥ ಎನ್. ಎಸ್ ಉಪಾಧ್ಯಕ್ಷ ದುಗ್ಗಪ್ಪ ಎನ್, ಮಹಾಲಿಂಗ ನಾಯ್ಕ, ಮುಖ್ಯ ಅತಿಥಿಗಳಾಗಿ ಸುದ್ದಿ ಸಮೂಹ ಸಂಸ್ಥೆಯ ಸಂಪಾದಕ ಡಾ. ಯು. ಪಿ ಶಿವಾನಂದ ಉಪಸ್ಥಿತರಿದ್ದರು.
ಓದಿ: ಉಕ್ರೇನ್ನಿಂದ ಹಿಂದಿರುಗಿದ ರಾಣೆಬೆನ್ನೂರು ವಿದ್ಯಾರ್ಥಿ: ನವೀನ್ ಸಾವಿನ ಕುರಿತು ಮಾಹಿತಿ ಬಿಚ್ಚಿಟ್ಟ ಜೂನಿಯರ್