ಮಂಗಳೂರು (ದ.ಕ): ಇಲ್ಲಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ 1250 ಬೆಡ್ಗಳಲ್ಲಿ 625 ಬೆಡ್ಗಳನ್ನು ಕೊರೊನಾ ಸೋಂಕಿತರಿಗೆ ನೀಡುವ ಭರವಸೆಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ನೀಡಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸಂಸದ ನಳಿನ್‌ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಆರೋಗ್ಯ ಇಲಾಖಾಧಿಕಾರಿ ಜೊತೆ ಆಸ್ಪತ್ರೆಗೆ ತೆರಳಿ ಅಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ ಬಳಿಕ ಅವರು ಈ ವಿಷಯ ತಿಳಿಸಿದರು.
ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿ ಅಧ್ಯಯನ ಮಾಡುತ್ತಿದ್ದು, ಜಿಲ್ಲೆಯ ಎಂಟು ಮೆಡಿಕಲ್ ಕಾಲೇಜುಗಳಿಗೆ ಜಿಲ್ಲಾಡಳಿತದಿಂದ ಭೇಟಿ ನೀಡಲಿದ್ದೇವೆ. ಕೋವಿಡ್ ಸೋಂಕಿತರಿಗೆ ಬೇರೆ ಬೇರೆ ಚಿಕಿತ್ಸೆ ಬಗ್ಗೆಯೂ ಚರ್ಚಿಸಲಾಯಿತು. ವೆಂಟಿಲೇಟರ್ ಅಗತ್ಯಬಿದ್ದಾಗ ಒಂದೊಂದು ಮೆಡಿಕಲ್ ಕಾಲೇಜಿನಿಂದ ವೆಂಟಿಲೇಟರ್ ಎಷ್ಟೆಷ್ಟು ಸಿಗಬೇಕೆಂದು ಚರ್ಚಿಸಲಾಗಿದೆ ಎಂದರು.
ಸರ್ಕಾರಿ ವೆಚ್ಚದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ನೀಡುವ ಉಚಿತ ಚಿಕಿತ್ಸೆ ಬಗ್ಗೆ ಚರ್ಚಿಸಲಾಗಿದೆ. ಎಪಿಎಲ್, ಬಿಪಿಎಲ್ ಕಾರ್ಡ್ದಾರರಿಗೆ ಪ್ರತಿ ಖಾಸಗಿ ಆಸ್ಪತ್ರೆಯಲ್ಲಿರುವ ಆರೋಗ್ಯ ಮಿತ್ರ ವ್ಯವಸ್ಥೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುವ ಕಾರ್ಯ ಕರಾರುವಾಕ್ಕಾಗಿ ಮಾಡಬೇಕು ಎಂದು ಸೂಚಿಸಲಾಗಿದೆ. ಹೆರಿಗೆಗೆ ಹೋದ ಮಹಿಳೆಯರನ್ನು ಆಸ್ಪತ್ರೆಗೆ ಅಲೆದಾಡಿಸಿದ ಬಗ್ಗೆ ತನಿಖೆ ಮಾಡಲು ಸೂಚಿಸಲಾಗಿದೆ. ತಪ್ಪು ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದರು.