ಸುಳ್ಯ : ಕಳೆದ ಎರಡು ತಿಂಗಳ ಹಿಂದೆ ಆರಂಭವಾದ ಹೋಟೆಲ್ ಒಂದರಲ್ಲಿ ಫಾಸ್ಟ್ಫುಡ್ ಕೆಲಸಗಾರನಾಗಿ ಸೇರಿದ ವ್ಯಕ್ತಿಯೋರ್ವ ಲಕ್ಷಾಂತರ ರೂ. ಹಾಗೂ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಕಡಬದಲ್ಲಿ ಜರುಗಿದೆ.
ಆಧಾರ್ ಕಾರ್ಡ್ ವಿಳಾಸದ ಪ್ರಕಾರ ಮೈಸೂರಿನ ಪಿರಿಯಾಪಟ್ಟಣ ತಾಲೂಕು ನಿವಾಸಿಯಾಗಿರುವ ಈತ ಹಾರನಹಳ್ಳಿ ಹೋಬಳಿಯ ರಾಮಮಂದಿರ ಸಮೀಪದ ನಿವಾಸಿ ಎಂ ಟಿ ಕರೀಗೌಡ ಎಂಬುವರ ಪುತ್ರ ಶರತ್ ಬಾಬು ಸಿ ಕೆ ಎಂದು ಗುರುತಿಸಲಾಗಿದೆ.
ಈತ ಸ್ಥಳೀಯವಾಗಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ. ಅಲ್ಲೇ ಪಕ್ಕದಲ್ಲಿ ಹೋಟೆಲ್ ಒಂದರಲ್ಲಿ ಎರಡು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ. ಈತ ಹೋಟೆಲ್ ಸುತ್ತಮುತ್ತಲಿನ ಪರಿಸರದ ಹಲವರಲ್ಲಿ ಸ್ನೇಹ ಸಂಪಾದಿಸಿಕೊಂಡಿದ್ದ.
ಈ ನಡುವೆ ಸ್ಥಳೀಯವಾಗಿ ಉನ್ನತ ಸ್ಥಾನದಲ್ಲಿ ಇರುವ ಹಲವಾರು ಜನರನ್ನು ತನ್ನ ಮಾತಿನ ಮೋಡಿ ಮೂಲಕ ವಂಚಿಸಿ ನಗದು, ಚಿನ್ನಾಭರಣಗಳು, ವಾಹನ, ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ಇದೀಗ ಪರಾರಿಯಾಗಿದ್ದಾನೆ.
ತಾನು ಕಡಬದಲ್ಲಿ ಫಾಸ್ಟ್ ಫುಡ್ ವ್ಯಾಪಾರ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇನೆ ಎಂದು ಹಲವರನ್ನು ಈತ ನಂಬಿಸಿದ್ದ ಎನ್ನಲಾಗಿದೆ. ಈತನ ಪರಾರಿ ಬಗ್ಗೆ ಇದೀಗ ಸಾರ್ವಜನಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಈತನ ವಿರುದ್ಧ ಹಣ ಕಳೆದುಕೊಂಡವರು ಈವರೆಗೂ ಪೊಲೀಸ್ ಠಾಣೆಗೆ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.