ಬೆಳ್ತಂಗಡಿ(ದ.ಕ): ಸರ್ಕಾರದ ನಿಯಮದಂತೆ ಕೋವಿಡ್-19 ಮುನ್ನೆಚ್ಚರಿಕೆಯೊಂದಿಗೆ ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಕಲ ತಯಾರಿ ಮಾಡಿಕೊಂಡಿದೆ. ತಾಲೂಕಿನಲ್ಲಿ ಈಗಾಗಲೇ 13 ಪರೀಕ್ಷಾ ಕೇಂದ್ರಗಳನ್ನು ಸಿದ್ಧಗೊಳಿಸಲಾಗಿದ್ದು, 3,849 ವಿದ್ಯಾರ್ಥಿಗಳು ಹಾಗೂ ಹೊರ ಜಿಲ್ಲೆಯ 51 ಮಕ್ಕಳು ತಾಲೂಕಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ತಾಲೂಕಿನಿಂದ ಹೊರ ಜಿಲ್ಲೆಯಲ್ಲಿ 212 ಮಕ್ಕಳು ಪರೀಕ್ಷೆ ಎದುರಿಸಲಿದ್ದಾರೆ. ಈಗಾಗಲೇ 13 ಕೇಂದ್ರಗಳ ಜೊತೆಗೆ ಬ್ಲಾಕ್ ಕೇಂದ್ರಗಳಲ್ಲಿ ಸ್ಥಳಾವಕಾಶ ಇಲ್ಲದಿದ್ದಲ್ಲಿ ಮುನ್ನೆಚ್ಚರಿಕೆಯಾಗಿ ಒಂದು ಹೆಚ್ಚುವರಿ ಪರೀಕ್ಷಾ ಕೇಂದ್ರದ ಜೊತೆಗೆ ಕಂಟೈನ್ಮೆಂಟ್ ಝೋನ್ ವಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು 3 ಕಾಯ್ದಿರಿಸಲಾದ ಪರೀಕ್ಷಾ ಕೇಂದ್ರ ಸೇರಿ 16 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.
ಪರೀಕ್ಷೆ ಪೂರ್ವ ತಯಾರಿಯಾಗಿ ಈಗಾಗಲೇ ಪ್ರತಿ ಕೊಠಡಿಗೆ 200 ಎಂ.ಎಲ್ ಸ್ಯಾನಿಟೈಸರ್ ಬಾಟಲ್, ಪ್ರತಿ ವಿದ್ಯಾರ್ಥಿಗೆ 3 ಮಾಸ್ಕ್‌ನಂತೆ 13,500 ಮರು ಬಳಕೆ ಮಾಡಬಹುದಾದ ಮಾಸ್ಕ್ ಸಿದ್ಧಪಡಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತ ಮುಂಜಾಗ್ರತೆ ವಹಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ ತಿಳಿಸಿದ್ದಾರೆ.
ಈಗಾಗಲೇ 4 ಕಡೆಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಆಗಮಿಸಲು ಬೇಕಾದ ವ್ಯವಸ್ಥೆಯನ್ನು ಶಾಲಾ ಮೈದಾನದಲ್ಲಿ ಮಾರ್ಕ್ ಮಾಡಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕೆ ಸಹಾಯವಾಣಿ ಜೊತೆಗೆ ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಜೊತೆಗೆ ಪರೀಕ್ಷಾ ಕೊಠಡಿ ಸಂಖ್ಯೆಯನ್ನೂ ನೀಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ದಿನ ಗೊಂದಲವಿಲ್ಲದೆ ಪರೀಕ್ಷೆಗೆ ಹಾಜರಾಗಬಹುದಾಗಿದೆ. ಬೆಳಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಕೊಠಡಿಯಲ್ಲೇ 10.15ರವರೆಗೆ ಪರೀಕ್ಷೆಗೆ ಓದಲು ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿಗಳೇ ಊಟದ ಬಾಕ್ಸ್ ತರುವಂತೆಯೂ ಸಲಹೆ ನೀಡಲಾಗಿದೆ.
15 ಖಾಸಗಿ ಬಸ್ ಸಹಿತ 5 ಹೆಚ್ಚುವರಿ ಬಸ್‌ಗಳನ್ನು ತುರ್ತು ಸಂದರ್ಭಕ್ಕೆ ನಿಯೋಜಿಸಲಾಗಿದೆ. ಇದರೊಂದಿಗೆ ಪ್ರತಿ ಕೇಂದ್ರಕ್ಕೆ ಒಂದರಂತೆ ವಿದ್ಯಾರ್ಥಿಗಳಿಗೆ ತುರ್ತು ಸೇವೆಗೆ ಮೀಸಲಿರಿಸಲಾಗಿದೆ. ಪ್ರತಿ ಕೇಂದ್ರಗಳ ಸಂಪರ್ಕಕ್ಕೆ ಬರುವಂತೆ ಉಚಿತ ಸರ್ಕಾರಿ ಬಸ್ ಸೇವೆಯೂ ಲಭ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ ಮಾಹಿತಿ ನೀಡಿದ್ದಾರೆ.