ಕಾರವಾರ (ಉತ್ತರ ಕನ್ನಡ): ಮಳೆಗಾಲದ ಸಂದರ್ಭದಲ್ಲಿ ಟನಲ್ ಸೋರಿಕೆಯಾಗುತ್ತಿದೆ ಎನ್ನುವ ಕಾರಣಕ್ಕೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸುರಂಗ ಮಾರ್ಗಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ನೀಡುವಂತೆ ಸೂಚಿಸಲಾಗಿತ್ತು. ಪ್ರಸ್ತುತ ಒಂದು ತಿಂಗಳು ಕಳೆದರೂ ಕೂಡಾ ಗುತ್ತಿಗೆ ಪಡೆದಿದ್ದ ಕಂಪನಿಯು ಪ್ರಮಾಣಪತ್ರ ನೀಡಲು ವಿಫಲವಾಗಿದೆ. ಈ ಸುರಂಗ ಮಾರ್ಗ ಬಂದ್ ಆಗಿರುವುದರಿಂದ ವಾಹನ ಸವಾರರು ನಿತ್ಯ ಸಂಚಾರಕ್ಕೆ ಪರದಾಡುವಂತಾಗಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಲಂಡನ್ ಬ್ರಿಡ್ಜ್ ಬಳಿ ಗುಡ್ಡ ಕೊರೆದು ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. ಈ ಸುರಂಗವನ್ನು ಕೆಲವು ತಿಂಗಳ ಹಿಂದೆಯೇ ಸಂಸದ ಅನಂತಕುಮಾರ ಹೆಗಡೆ ಉದ್ಘಾಟನೆ ಮಾಡಿದ್ದರು. ಆದರೆ, ಇತ್ತೀಚೆಗೆ ಮಳೆಗಾಲದಲ್ಲಿ ಸುರಂಗ ಮಾರ್ಗದ ಒಳಭಾಗದಲ್ಲಿ ನೀರು ಸೋರಿಕೆ ಆರಂಭವಾಗಿತ್ತು. ಇದರಿಂದ ಸುರಂಗ ಮಾರ್ಗದ ಸುರಕ್ಷತೆ ಕುರಿತು ಜಿಲ್ಲಾಡಳಿತ ಅನುಮಾನ ವ್ಯಕ್ತಪಡಿಸಿತ್ತು. ಜೊತೆಗೆ ಜಿಲ್ಲಾಡಳಿತವು ಫಿಟ್ನೆಸ್ ಸರ್ಟಿಫಿಕೇಟ್ ನೀಡುವಂತೆ ತಿಳಿಸಿತ್ತು ಮತ್ತು ವಾಹನ ಸಂಚಾರವನ್ನೂ ನಿಷೇಧಿಸಿತ್ತು.
ಇದೀಗ ಟನಲ್ ಬಂದ್ ಆಗಿ ತಿಂಗಳು ಕಳೆದರೂ, ಗುತ್ತಿಗೆ ಕಂಪನಿ ಐಆರ್‌ಬಿ ಫಿಟ್ನೆಸ್ ಪ್ರಮಾಣಪತ್ರ ನೀಡಿಲ್ಲ. ಸುರಂಗ ಮಾರ್ಗ ಬಂದ್ ಆಗಿರುವುದರಿಂದ ಪ್ರತಿನಿತ್ಯ ಬೇರೆ ಮಾರ್ಗಗಳ ಮೂಲಕ ಸುತ್ತುವರೆದು ತೆರಳುತ್ತಿದ್ದಾರೆ. ಜೊತೆಗೆ ಇದು ಗೋವಾದಿಂದ ಮಂಗಳೂರು ಸಂಪರ್ಕಿಸುವ ಹೆದ್ದಾರಿಯಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಟ ನಡೆಸುವುದರಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಕೂಡಾ ಉಂಟಾಗುತ್ತಿದೆ ಎಂದು ಹೇಳುತ್ತಾರೆ ವಾಹನ ಸವಾರರು.
ಕಾರವಾರದಿಂದ ಬಿಣಗಾ ನಡುವೆ ನಿರ್ಮಾಣವಾಗಿದ್ದ ನಾಲ್ಕು ಟನಲ್‌ಗಳಿಂದ ಹೆದ್ದಾರಿಯಲ್ಲಿ ಸುಮಾರು 3 ರಿಂದ 4 ಕಿಮೀ ದೂರ ಕಡಿಮೆಯಾಗುತ್ತಿತ್ತು. ಘಟ್ಟದ ರಸ್ತೆಯಲ್ಲಿ ಸುತ್ತುವರೆದು ಸಾಗಲು ತಗುಲುತ್ತಿದ್ದ ಸಮಯವೂ ಸಹ ಉಳಿಯುತ್ತಿದ್ದುದರಿಂದ ಕೆಲಸಕ್ಕೆ ತೆರಳುವವರಿಗೆ ತುಂಬಾ ಅನುಕೂಲವಾಗುತ್ತಿತ್ತು. ಆದರೆ, ಇದೀಗ ಮತ್ತೆ ಹಳೆಯ ರಸ್ತೆಯಲ್ಲೇ ಸಾಗಬೇಕಿದ್ದು, ಇದರಿಂದ ಮತ್ತೆ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.
ಸಚಿವ ಮಂಕಾಳು ವೈದ್ಯ ಪ್ರತಿಕ್ರಿಯೆ: ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ''ಟನಲ್ನಲ್ಲಿ ಸಮಸ್ಯೆ ಇರುವುದರಿಂದ ಬಂದ್ ಮಾಡಲಾಗಿದೆ. ಗುತ್ತಿಗೆ ಪಡೆದ ಕಂಪನಿ ಆದಷ್ಟು ಶೀಘ್ರದಲ್ಲಿ ಫಿಟ್ನೆಸ್ ಸರ್ಟಿಫಿಕೇಟ್ ನೀಡದಿದ್ದಲ್ಲಿ ಟೋಲ್ ಸಂಗ್ರಹವನ್ನೂ ಬಂದ್ ಮಾಡುತ್ತೇವೆ'' ಎಂದು ಎಚ್ಚರಿಕೆ ನೀಡಿದ್ದಾರೆ.
ಸುರಕ್ಷತೆ ಬಗ್ಗೆ ಮೊದಲೇ ಗಮನಹರಿಸದೇ ತರಾತುರಿಯಲ್ಲಿ ಸುರಂಗ ಮಾರ್ಗ ಆರಂಭಿಸಿ, ಇದೀಗ ಬಂದ್ ಮಾಡಿರೋದು ವಾಹನ ಸವಾರರು ಅನಾನುಕೂಲವಾಗಿದೆ. ಸಂಬಂಧಪಟ್ಟವರು ಆದಷ್ಟು ಬೇಗ ಇತ್ತ ಗಮನಹರಿಸಿ ಈ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಇದನ್ನೂ ಓದಿ: ಕೆಲಸ ಮಾಡದೇ ನಕಲಿ ಬಿಲ್ ಮಾಡಿದವರಲ್ಲಿ ಬಹುತೇಕರು ಅಶ್ವತ್ಥ್ ನಾರಾಯಣ್, ಅಶೋಕ್ ಬೇನಾಮಿಗಳೇ: ಎಂ.ಲಕ್ಷ್ಮಣ್