ಸುಳ್ಯ (ದಕ್ಷಿಣ ಕನ್ನಡ): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಎಂಡೋಪೀಡಿತ ವಿದ್ಯಾರ್ಥಿಯಾದ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮನೋಜ್ ಕುಮಾರ್ ಪಿಯುಸಿ ಕಲಾ ವಿಭಾಗದಲ್ಲಿ 360 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಮನೋಜ್ ಕುಮಾರ್ ಕಿವಿ ಮತ್ತು ಕೈ ಎಲುಬು ಸಮಸ್ಯೆಯಿಂದ ಬಳಲುತ್ತಿದ್ದು, ನಾಲ್ಕು ಬಾರಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ. ಶೇ.85ರಷ್ಟು ಎಂಡೋ ಪೀಡಿತರಾಗಿರುವ ಇವರು ತಮ್ಮ ಆರೋಗ್ಯ ಸಮಸ್ಯೆ ಮೆಟ್ಟಿನಿಂತು ಈ ಸಾಧನೆ ಮಾಡಿದ್ದಾರೆ.
ಇವರು ಸೇವಾಭಾರತಿ ಮಂಗಳೂರು ಇವರು ನಡೆಸುತ್ತಿರುವ ರಾಮಕುಂಜ ಕಾಜರುಕುಕ್ಕು ವಿದ್ಯಾಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ಕಲಾ ವಿಭಾಗದಲ್ಲಿ ಪಿಯುಸಿಯಲ್ಲಿ ಅಭ್ಯಾಸ ಮಾಡಿದ್ದರು.
ಎಂಡೋಪೀಡಿತರಾಗಿರುವ ಮನೋಜ್ ಕುಮಾರ್ ಇವರು ಹಳೆನೇರೆಂಕಿಯ ನಿಶ್ಮಿತಾ ಎಂಬುವರ ಸಹಾಯದಿಂದ ಉಪ್ಪಿನಂಗಡಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಎದುರಿಸಿರುತ್ತಾರೆ. ತನ್ನ ಮಾವನ ಮನೆ ಪೆರಿಯಡ್ಕದಿಂದ ಶಾಲೆಗೆ ಹೋಗುತ್ತಿದ್ದರು.
ಇವರಿಗೆ ಶಿಕ್ಷಕರಾದ ಶಶಿಕಲಾ ನರಿಮೊಗರು, ಸವಿತಾ ಹಾಗೂ ಸಹನಾ ತರಬೇತಿ ನೀಡಿದ್ದಾರೆ. ಮನೋಜ್ ಕುಮಾರ್ ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ಪಲ್ಲತಡ್ಕ ಭಾಸ್ಕರ ಗೌಡ ಹಾಗೂ ರೇವತಿ ದಂಪತಿ ಪುತ್ರ. ಇವರು ಎಸ್‍ಎಸ್‍ಎಲ್‍ಸಿ ಬಳಿಕ ನೇರವಾಗಿ ಪಿಯುಸಿ ಪರೀಕ್ಷೆ ಬರೆದಿದ್ದಾರೆ.