ಸುಳ್ಯ: ಒಂಟಿ ಸಲಗವೊಂದು ಬೆಳಗ್ಗೆಯಿಂದ ಸಂಜೆಯವರೆಗೆ ಕೋಡಿಂಬಾಳ ಸಮೀಪದ ಪುಳಿಕುಕ್ಕು ಕಾಡಿನಲ್ಲಿ ಬೀಡು ಬಿಟ್ಟಿದ್ದು, ಇದೀಗ ಕಡಬ ಮೂಲಕ ಇಚ್ಲಂಪಾಡಿ ಕಡೆಗೆ ಪ್ರಯಾಣ ಬೆಳೆಸಿದೆ.
ಸುಳ್ಯ ತಾಲೂಕಿನ ಪಂಬೆತ್ತಾಡಿ ಕಾಡಿನಿಂದ ಸೋಮವಾರ ರಾತ್ರಿ ಕಡಬ ಕಡೆಗೆ ಹೊರಟಿದ್ದ ಕಾಡಾನೆಯು ಕರಿಕಳ, ಪಂಜ ಮಾರ್ಗವಾಗಿ ಪುಳಿಕುಕ್ಕು ಅರಣ್ಯ ಪ್ರದೇಶಕ್ಕೆ ತಲುಪಿತ್ತು. ಹಗಲು ಸಮಯದಲ್ಲಿ ಈ ಪ್ರದೇಶದಲ್ಲಿ ವಿಶ್ರಾಂತಿ ಪಡೆದ ಸಲಗ ಇದೀಗ ಕಡಬ ಮೂಲಕ ಇಚ್ಲಂಪಾಡಿ ಕಡೆಗೆ ಪ್ರಯಾಣ ಬೆಳೆಸಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆನೆಯು ಪ್ರತೀ ವರ್ಷ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದು, ಯಾರಿಗೂ ಯಾವುದೇ ತೊಂದರೆ ನೀಡುವುದಿಲ್ಲ. ಆನೆಯು ಅದರಷ್ಟಕ್ಕೆ ಸಂಚರಿಸುತ್ತದೆ. ಈ ಹಿಂದಿನ ವರ್ಷವೂ ಕೂಡಾ ಪುಳಿಕುಕ್ಕು ಕಾಡಿನಲ್ಲಿ ಒಂದು ದಿನ ಬೀಡು ಬಿಟ್ಟಿತ್ತು. ಹಗಲು ಹೊತ್ತಿನಲ್ಲಿ ಈ ಆನೆಯು ಸಂಚರಿಸುವ ಸಾಧ್ಯತೆ ಕಡಿಮೆ. ಆನೆಯ ಚಲನ ವಲನಗಳನ್ನು ಅರಣ್ಯ ಇಲಾಖೆ ಗಮನಿಸಲಾಗುತ್ತಿದ್ದು, ಆನೆಗೆ ಸಂಚಾರ ಪಥವನ್ನು ಕ್ಲಿಯರ್ ಮಾಡಿ ಕೊಡಲಾಗುತ್ತಿದೆ.
ಕಡಬ,ಇಚ್ಲಂಪಾಡಿ, ಬಲ್ಯ ಮಾರ್ಗವಾಗಿ ಸಂಚರಿಸುವವರು ಸ್ವಲ್ಪ ಎಚ್ಚರಿಕೆಯಿಂದ ಹಾಗೂ ಜಾಗರೂಕತೆಯಿಂದ ಪ್ರಯಾಣಿಸುವಂತೆಯೂ, ಬೆಳಗ್ಗೆ ತೋಟಗಳಿಗೆ ನೀರು ಬಿಡುವವರು, ರಬ್ಬರ್ ಟ್ಯಾಪಿಂಗ್ಗೆ ಹೋಗುವವರು ಜಾಗೃತಿ ವಹಿಸುವಂತೆ ಪಂಜ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ವಿನಂತಿಸಿದ್ದಾರೆ.
ಓದಿ: ಪಕ್ಷ ಬಲವರ್ಧನೆಗೆ ದಳ ಪತಿಗಳು ಸಜ್ಜು: ಬೆಂಗಳೂರಲ್ಲಿ ಫೆ.14ರಂದು ಬೃಹತ್ ಸಮಾವೇಶ
ಕೆಲವು ದಿನದ ಹಿಂದೆ ಈ ಕಾಡಾನೆ ಸುಳ್ಯ ತಾಲೂಕಿನ ಪೆರಾಜೆ ಭಾಗದಲ್ಲಿ ಕಂಡು ಬಂದಿತ್ತು. ಈ ಬಗ್ಗೆ ಈಟಿವಿ ಭಾರತ ವಿಸ್ತೃತವಾದ ವರದಿ ನೀಡಿ, ಈ ಕಾಡಾನೆ ವಾಪಸ್ ಬರುವ ಮಾಹಿತಿಯನ್ನು ನೀಡಿತ್ತು. ಇದೀಗ ಆನೆಯು ಕಡಬ, ಪಂಜ, ಪಂಬೆತ್ತಾಡಿ ಭಾಗವಾಗಿ ಪೆರಾಜೆ ದಾಟಿ ಕೊಡಗಿನ ಅರಣ್ಯಕ್ಕೆ ಸಂಚರಿಸಿ ಅದೇ ಮಾರ್ಗವಾಗಿ ಹಿಂತಿರುಗಿ ಬಂದಿದೆ.