ನೆಲ್ಯಾಡಿ (ದಕ್ಷಿಣ ಕನ್ನಡ) : ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರಿಯಶಾಂತಿ, ಮಣ್ಣಗುಂಡಿ ಪರಿಸರದಲ್ಲಿ ಹಲವು ಸಮಯಗಳಿಂದ ಕಾಡಾನೆಯೊಂದು ಓಡಾಡುತ್ತಿದ್ದು, ತೋಟಗಳಿಗೆ ನುಗ್ಗಿ ಕೃಷಿ ನಾಶ ಮಾಡುತ್ತಿದೆ.
ರಾತ್ರಿ ವೇಳೆ ತೋಟಗಳಿಗೆ ನುಗ್ಗುವ ಒಂಟಿ ಸಲಗ ಬಾಳೆ, ತೆಂಗಿನ ಗಿಡಗಳನ್ನು ತುಳಿದು ನಾಶಮಾಡುತ್ತಿದೆ. ಕಳೆದ ಶನಿವಾರ ರಾತ್ರಿ ಪೆರಿಯಶಾಂತಿ ಸಮೀಪದ ಮಣ್ಣಗುಂಡಿಯ ಸೇಸಪ್ಪ, ತೋಮಸ್, ಹಮೀದ್, ಇಬ್ರಾಹಿಂ, ನಾರಾಯಣ ಎಂಬುವವರ ತೋಟಗಳಿಗೆ ನುಗ್ಗಿ ಕೃಷಿ ನಾಶ ಮಾಡಿದೆ.
ಇಷ್ಟರವೆಗೆ ಅರಣ್ಯ ಸಮೀಪದ ತೋಟಗಳಿಗೆ ಮಾತ್ರ ದಾಳಿ ಮಾಡುತ್ತಿದ್ದ ಆನೆ, ಇದೀಗ ಜನವಸತಿ ಪ್ರದೇಶಗಳಿಗೂ ಲಗ್ಗೆಯಿಟ್ಟಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.