ಮಂಗಳೂರು: ಖಾಸಗಿ ಆಸ್ಪತ್ರೆಯೊಂದರ ಅಮಾನವೀಯತೆಯಿಂದ ಬೀದಿಪಾಲಾಗಿದ್ದ ನಾಲ್ವರು ನಿರ್ಗತಿಕ ವೃದ್ಧ ರೋಗಿಗಳನ್ನು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಇಎಸ್ಐ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚನೆ ಮೇರೆಗೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿರ್ಗತಿಕ ವೃದ್ಧ ರೋಗಿಗಳನ್ನು ಆ್ಯಂಬುಲೆನ್ಸ್ ಮೂಲಕ ಇಎಸ್ಐ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿ ಚಿಕಿತ್ಸೆ ನೀಡಿ ಬಳಿಕ ಅವರನ್ನು ಬೇರೆಡೆ ಸ್ಥಳಾಂತರ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಅಮಾನವೀಯತೆ ಮೆರೆದ ಖಾಸಗಿ ಆಸ್ಪತ್ರೆ :
ವೆನ್ಲಾಕ್ ಜಿಲ್ಲಾಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಬದಲಾದ ಬಳಿಕ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಈ ನಿರ್ಗತಿಕ ವೃದ್ಧರು ಕಣಚೂರು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದರು. ಮೂರು ತಿಂಗಳು ಚಿಕಿತ್ಸೆ ನೀಡಿದ ಬಳಿಕ ನಿನ್ನೆ ನಗರದ ಕಂಕನಾಡಿ ಬಸ್ ಸ್ಟ್ಯಾಂಡ್ ಬಳಿ ಬಿಟ್ಟು ಹೋಗಿದ್ದರು.