ಮಂಗಳೂರು: ರಾಜ್ಯ ಸರ್ಕಾರದ ಏಕಲವ್ಯ ಮತ್ತು ಕ್ರೀಡಾರತ್ನ ಪ್ರಶಸ್ತಿ ಪಡೆದವರಲ್ಲಿ ಎಂಟು ಮಂದಿ ಮೂಡಬಿದರಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ರೀಡಾ ವಿದ್ಯಾರ್ಥಿಗಳು ಎಂದು ಸಂಸ್ಥೆಯ ಅಧ್ಯಕ್ಷ ಡಾಎಂ ಮೋಹನ್ ಆಳ್ವ ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕಲವ್ಯ ಪ್ರಶಸ್ತಿ ಪಡೆದ ಅಭಿನಯ ಶೆಟ್ಟಿ, ಭಾಂಧವ್ಯ, ಅಭಿಷೇಕ್ ಶೆಟ್ಟಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಜಯಲಕ್ಷ್ಮಿ ಜೆ, ಲಾವಣ್ಯ ಬಿ.ಡಿ, ರಕ್ಷಿತ್ ಎಸ್, ಪಲ್ಲವಿ ಎಸ್.ಕೆ, ಅನುಶ್ರೀ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ವಿದ್ಯಾರ್ಥಿಗಳಾಗಿದ್ದಾರೆ.
ಅಭಿಷೇಕ್ ಶೆಟ್ಟಿ ಅಥ್ಲೆಟಿಕ್ಸ್ನಲ್ಲಿ 2019ರ ಸಾಲಿನ ಏಕಲವ್ಯ ಪ್ರಶಸ್ತಿ ಪಡೆದಿದ್ದಾರೆ. ಅವರು ಅಂತರಾಷ್ಟ್ರೀಯ ಕ್ರೀಡಾಪಟುವಾಗಿದ್ದು ಪ್ರಸ್ತುತ ದಕ್ಷಿಣ ಪಶ್ಚಿಮ ರೈಲ್ವೆ ಉದ್ಯೋಗಿಯಾಗಿದ್ದಾರೆ. ಭಾಂಧವ್ಯ ಬಾಸ್ಕೆಟ್ ಬಾಲ್ನಲ್ಲಿ 2018ರ ಏಕಲವ್ಯ ಪ್ರಶಸ್ತಿ ಪಡೆದಿದ್ದಾರೆ. ಇವರು ಅಂತರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿದ್ದು ಪಶ್ಚಿಮ ರೈಲ್ವೆ ಉದ್ಯೋಗಿಯಾಗಿದ್ದಾರೆ. ಅಭಿನಯ ಅಥ್ಲೆಟಿಕ್ಸ್ನಲ್ಲಿ 2019ರ ಏಕಲವ್ಯ ಪ್ರಶಸ್ತಿ ವಿಜೇತರಾಗಿದ್ದು ಪಶ್ಚಿಮ ರೈಲ್ವೆ ಉದ್ಯೋಗಿಯಾಗಿದ್ದಾರೆ.
ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ವಿಜೇತ ಬಾಲ್ ಬ್ಯಾಡ್ಮಿಂಟನ್ ಆಟಗಾರ್ತಿ ಜಯಲಕ್ಷ್ಮಿ 2017ರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ವಿಜೇತೆಯಾಗಿದ್ದು, ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ತರಬೇತುದಾರರಾಗಿದ್ದಾರೆ. ಲಾವಣ್ಯ ಬಿ.ಡಿ ಬಾಲ್ ಬ್ಯಾಡ್ಮಿಂಟನ್ನಲ್ಲಿ 2018ರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪಡೆದಿದ್ದು, ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಆಟಗಾರ್ತಿಯಾಗಿದ್ದಾರೆ. ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಆಟಗಾರ್ತಿ ಪಲ್ಲವಿ ಬಾಲ್ ಬ್ಯಾಡ್ಮಿಂಟನ್ನಲ್ಲಿ 2019ರ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಗಳಿಸಿದ್ದಾರೆ. ಪ್ರೊ ಕಬ್ಬಡಿ ಆಟಗಾರ ರಕ್ಷಿತ್ ಎಸ್ ಕಬಡ್ಡಿಯಲ್ಲಿ 2019ರ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಗಳಿಸಿದ್ದಾರೆ. ಅನುಶ್ರೀ ಕುಸ್ತಿಯಲ್ಲಿ 2017ರ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಗಳಿಸಿದ್ದಾರೆ ಎಂದು ತಿಳಿಸಿದರು.
ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನಿರಂತರವಾಗಿ 7ನೇ ಬಾರಿಗೆ ಕ್ರೀಡಾ ರತ್ನ ಪ್ರಶಸ್ತಿ ಗಳಿಸಿದ್ದಾರೆ. 2 ವರ್ಷಗಳ ಹಿಂದೆ ಆಳ್ವಾಸ್ ಶಿಕ್ಷಣ ಸಂಸ್ಥೆ ಕ್ರೀಡೆಯಲ್ಲಿ ತೋರಿದ ಗಣನೀಯ ಸಾಧನೆಗಾಗಿ ಕ್ರೀಡ ಪೋಷಕ್ ಪ್ರಶಸ್ತಿಯನ್ನು ಗಳಿಸಿತ್ತು ಎಂದು ತಿಳಿಸಿದರು.