ಭಟ್ಕಳ (ದಕ್ಷಿಣ ಕನ್ನಡ): ತಾಲೂಕಿನಲ್ಲಿ ಕೊರೊನಾ ವೈರಸ್ ಕಡಿವಾಣಕ್ಕೆ ತಾಲೂಕು ಆಡಳಿತ ಸಾಕಷ್ಟು ರೀತಿಯ ಪ್ರಯತ್ನ ನಡೆಸುತ್ತಿದ್ದು, ಮುಸ್ಲಿಂ ಬಂಧುಗಳ ಶುಕ್ರವಾರದ ಪ್ರಾರ್ಥನೆಯನ್ನು ಅವರ ಮನೆಗಳಲ್ಲಿ ನಡೆಸುವಂತೆ ಮನವೊಲಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ಯಶಸ್ವಿಯಾಗಿದ್ದು, ಎಲ್ಲಾ ಮುಸ್ಲಿಂ ಬಾಂದವರು ತಾಲೂಕು ಆಡಳಿತದ ಸೂಚನೆಯಂತೆ ಪ್ರಾರ್ಥನೆ ಮಾಡಿದರು.
ಬುಧವಾರದಿಂದ ಭಟ್ಕಳದ ಎಲ್ಲೆಡೆ ಡ್ರೋಣ್ ಮೂಲಕ ಜನರ ಓಡಾಟದ ಮೇಲೆ ನಿಗಾ ವಹಿಸಲು ಡಿವೈಎಸ್‍ಪಿ ಗೌತಮ್ ಕೆ.ಸಿ. ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭವಾಗಿದ್ದು, ಅದರಂತೆ ಶುಕ್ರವಾರವೂ ಮುಂದುವರೆದಿದೆ. ಇಲ್ಲಿನ ಪಟ್ಟಣದ ಜಾಮೀಯಾ ಸ್ಟ್ರೀಟ್ ಬಳಿ ಚಿನ್ನದ ಪಳ್ಳಿ ಎದುರು ಪೊಲೀಸ್ ಸರ್ಪಗಾವಲಿನಲ್ಲಿ ಡ್ರೋಣ್ ಕಾರ್ಯಾಚರಣೆ ನಡೆಸಲಾಯಿತು.
ಕಳೆದ ಶುಕ್ರವಾರವೂ ಕೆಲವು ಮಸೀದಿಗಳಲ್ಲಿ ಗುಟ್ಟಾಗಿ ಪ್ರಾರ್ಥನೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇಲಾಖೆಗೆ ದೊರಕಿದ್ದ ಹಿನ್ನೆಲೆ ಜನರು ಗುಂಪು ಸೇರಬಾರದೆಂಬ ಉದ್ದೇಶದೊಂದಿಗೆ ಸಮುದಾಯದಲ್ಲಿ ಕೊರೊನಾ ಹರಡಬಾರದೆಂದು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು.
ಪಟ್ಟಣದ ಮುಖ್ಯ ಪ್ರದೇಶಗಳಲ್ಲಿ ಡ್ರೋಣ್ ಹಾರಾಟ ನಡೆಸಿ ಜನರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು. ಇದರಿಂದ ಶುಕ್ರವಾರ ಪರಿಸ್ಥಿತಿ ಸಂಪೂರ್ಣ ಪೊಲೀಸರ ಹತೋಟಿಗೆ ಬಂದಿದ್ದು, ಜನರು ಮನೆಯಿಂದ ಹೊರಬರುವ ಸಾಹಸಕ್ಕೆ ಕೈ ಹಾಕಲಿಲ್ಲ. ಸದ್ಯ ಭಟ್ಕಳದ ಪರಿಸ್ಥಿತಿ ಒಂದು ಹಂತಕ್ಕೆ ಹತೋಟಿಯಲ್ಲಿ ಬಂದಿದ್ದು ಮುಂದಿನ ಕೆಲವು ದಿನ ಜನರು ಇದೆ ತರನಾದ ಸಹಕಾರ ನೀಡಬೇಕು ಎಂದು ಡಿವೈಎಸ್‍ಪಿ ಗೌತಮ್ ಕೆ.ಸಿ ವಿನಂತಿದ್ದಾರೆ.