ಬಂಟ್ವಾಳ: ಮಂಗಳೂರು ವಿಧಾನಸಭಾ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಜೀಪಮುನ್ನೂರಿನ ಆಲಾಡಿಯಲ್ಲಿ ನಿರ್ಮಾಣವಾಗುತ್ತಿರುವ 182 ಕೋಟಿ ರೂ.ಗಳ ಮೊದಲ ಹಂತದ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಇದನ್ನು 2ನೇ ಹಂತದಲ್ಲಿ ವಿಸ್ತರಿಸಲು ಈಗಾಗಲೇ 280 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ತಾಲೂಕಿನ ಸಜೀಪಮುನ್ನೂರು ಆಲಾಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರಿನ ಯೋಜನೆಯ ಜಾಕ್ವೆಲ್ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನದ ಗೇಟ್ ಸಿಸ್ಟಮ್ನ ಜಾಕ್ವೆಲ್ ರಾಜ್ಯದಲ್ಲೇ ಮೊದಲ ಬಾರಿಗೆ ಇಲ್ಲಿಯೇ ಅನುಷ್ಠಾನಗೊಳ್ಳುತ್ತಿದೆ ಎಂದು ತಿಳಿಸಿದರು.
ಹಿಂದೆ ತಾನು ನಗರಾಭಿವೃದ್ಧಿ ಸಚಿವನಾಗಿದ್ದ ವೇಳೆ ಕ್ಷೇತ್ರದ ಗ್ರಾಮೀಣ ಹಾಗೂ ನಗರ ವ್ಯಾಪ್ತಿಯ ಎಲ್ಲಾ ಭಾಗದ ಜನರಿಗೆ 24 ಗಂಟೆ ಕುಡಿಯುವ ನೀರನ್ನು ಒದಗಿಸಲು ಯೋಜನೆ ಅನುಷ್ಠಾನಗೊಂಡಿತ್ತು. ಈ ಜಾಕ್ವೆಲ್ನಲ್ಲಿ 1300 ಹೆಚ್ಪಿಯ 4 ಪಂಪುಗಳಿರಲಿದ್ದು, ಕಂಬಳಪದವು ವಾಟರ್ ಟ್ರಿಟ್ಮೆಂಟ್ ಫ್ಲಾಂಟ್ ನಿರ್ಮಾಣವಾಗಲಿದ್ದು, ಒಟ್ಟು 72 ಎಂಎಲ್ ನೀರನ್ನು ನದಿಯಿಂದ ಎತ್ತಲಾಗುತ್ತದೆ ಎಂದರು.
ಗೊಂದಲ ಬೇಡ: ಸಜೀಪಮುನ್ನೂರು ಗ್ರಾಮದ ನಾಗರಿಕರಿಗೆ ಯಾವುದೇ ಗೊಂದಲ ಬೇಡ, ಈ ಯೋಜನೆಯಿಂದ ಸಜೀಪಮನ್ನೂರು ಸಹಿತ ಅಕ್ಕಪಕ್ಕದ ಗ್ರಾಮಗಳಿಗೂ ನೀರು ಪೂರೈಕೆಗೆ ಎಲ್ಲಾ ರೀತಿ ಕ್ರಮ ಕೈಗೊಳ್ಳಲಾಗುವುದು. 2ನೇ ಹಂತದ ಪೈಪ್ ಲೈನ್ ಕಾಮಗಾರಿಯ ಸಂದರ್ಭದಲ್ಲಿ ಈ ಭಾಗದ ಜನರಿಗೂ ನೀರು ಪೂರೈಕೆಗೆ ಸಂಬಂಧಿಸಿ ಪೈಪ್ ಲೈನ್ ಅಳವಡಿಸಲಾಗುವುದು ಎಂದು ಹೇಳಿದರು.
ಓದಿ: ಜಗಳೂರಿನ ಜನತೆಗೆ ಸಿಹಿ ಸುದ್ದಿ.. ವರ್ಷಾಂತ್ಯಕ್ಕೆ 57 ಕೆರೆಗೆ ಹರಿಯಲಿದ್ದಾಳೆ ತುಂಗಭದ್ರೆ..
ಉಳ್ಳಾಲ ತಾಲೂಕು ಅನುಷ್ಠಾನದ ಹಿನ್ನೆಲೆ ತಹಶೀಲ್ದಾರ್ ಅವರ ನೇಮಕವಾಗಿದ್ದು, ಪ್ರಸ್ತುತ ಉಳ್ಳಾಲದಿಂದ ಪುದು, ತುಂಬೆ, ಮೇರಮಜಲು ಗ್ರಾಮಗಳನ್ನು ಕೈಬಿಟ್ಟಿರುವುದರಿಂದ 20 ಕೋಟಿ ರೂ.ಗಳ ಸಜೀಪ- ತುಂಬೆ ಸೇತುವೆ ಕಾಮಗಾರಿಯೂ ವಿಳಂಬವಾಗಿದ್ದು, ಅದಕ್ಕೆ ಒಪ್ಪಿಗೆ ಸಿಗುವ ಕಾರ್ಯ ಬಾಕಿ ಇದೆ ಎಂದರು.