ಮಂಗಳೂರು: ಕೋವಿಡ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಮುಚ್ಚಲಾಗಿದ್ದ ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಇಂದು ವ್ಯಾಪಾರ ನಡೆಸಲು ವ್ಯಾಪಾರಿಗಳು ಸಿದ್ಧತೆ ನಡೆಸಿದ್ದರು. ಆದರೆ ಮಹಾನಗರ ಪಾಲಿಕೆ ಮಾರುಕಟ್ಟೆ ತೆರೆಯದಂತೆ ಸೂಚಿಸಿದ್ದು, ಬೆಳ್ಳಂಬೆಳಗ್ಗೆ ಮಾರುಕಟ್ಟೆ ಆವರಣ ನಾಟಕೀಯ ಬೆಳೆವಣಿಗೆಗೆ ಸಾಕ್ಷಿಯಾಯಿತು.
ಸೆಂಟ್ರಲ್ ಮಾರುಕಟ್ಟೆ ಮುಂಭಾಗ ಪೊಲೀಸ್ ನಿಯೋಜನೆಗೊಂಡಿದ್ದು, ಮ.ನ.ಪಾ ಅಧಿಕಾರಿಗಳು ಯಾವುದೇ ಕಾರಣಕ್ಕೆ ಅಂಗಡಿಗಳನ್ನು ತೆರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭ ವ್ಯಾಪಾರಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಮಾರುಕಟ್ಟೆ ತೆರೆಯದಂತೆ ಸುತ್ತಲೂ ಸಾಕಷ್ಟು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಮಾರುಕಟ್ಟೆ ಪ್ರವೇಶಿಸುವ ನಾಲ್ಕು ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ.
ಈ ವೇಳೆ ವ್ಯಾಪಾರಿಗಳು ಬಲವಂತವಾಗಿ ಅಂಗಡಿಗಳನ್ನು ತೆರೆಯಲು ಮುಂದಾದ ಪ್ರಸಂಗವೂ ನಡೆಯಿತು. ಈ ವೇಳೆ ಕಾರ್ಯಪ್ರವೃತ್ತರಾದ ಪೊಲೀಸರು ವ್ಯಾಪಾರಿಗಳ ಪ್ರಯತ್ನವನ್ನು ತಡೆದರು. ಈ ಮೂಲಕ ಸ್ಥಳದಲ್ಲಿ ಪರಿಸ್ಥಿತಿ ತಿಳಿಯಾಯಿತು.