ಧರ್ಮಸ್ಥಳ : ಮುರುಡೇಶ್ವರ ನಿರ್ಮಾತೃ ಶಿಕ್ಷಣ ಪ್ರೇಮಿ ಆರ್ ಎನ್ ಶೆಟ್ಟಿ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.
ಆರ್ ಎನ್ ಶೆಟ್ಟಿಯವರ ನಿಧನದ ವಾರ್ತೆ ತಿಳಿದು ವಿಷಾದವಾಯಿತು. ಅವರು ನಾನು ಮೆಚ್ಚಿದ ವ್ಯಕ್ತಿ. ಸಂಪಾದನೆ ಎರಡು ಕೈಯಲ್ಲಿ ಮಾಡಿ ನಾಲ್ಕು ಕೈಯಲ್ಲಿ ದಾನ ಮಾಡು ಎಂಬ ಮಾತಿನನ್ವಯದಂತೆ ಶೈಕ್ಷಣಿಕವಾಗಿ ಯಾವುದೇ ಪದವಿ ಪಡೆಯದಿದ್ದರೂ ಪ್ರಸಿದ್ಧರಾದ ಅವರು ಆಡಳಿತ ತರಬೇತಿದಾರರಿಗೆ ಶಿಕ್ಷಣ ಕೊಡುವಷ್ಟು ತಜ್ಞರಾಗಿದ್ದರು. ಅಂತೆಯೇ ಮುರುಡೇಶ್ವರ ಕ್ಷೇತ್ರವನ್ನು ಏಕಾಗ್ರತೆಯಿಂದ ಅಭಿವೃದ್ಧಿ ಪಡಿಸಿ ಎಲ್ಲರೂ ಒಮ್ಮೆ ವೀಕ್ಷಿಸಲೇ ಬೇಕಾದ ಪವಿತ್ರ ಕ್ಷೇತ್ರವಾಗಿ ಪರಿವರ್ತಿಸಿದರು ಎಂದರು.
![R N Shetty Pass Away](https://etvbharatimages.akamaized.net/etvbharat/prod-images/kn-mng-belthangadi2-santhapasuchane-photo-kac10018_18122020082513_1812f_1608260113_620.jpg)
ವ್ಯವಹಾರ, ಧಾರ್ಮಿಕತೆ ಎಲ್ಲಾ ರಂಗದಲ್ಲಿಯೂ ಯಶಸ್ಸು ಪಡೆದು ಮಾದರಿಯಾಗಿದ್ದರು. ದಾನದಲ್ಲಿಯೂ ಎತ್ತಿದ ಕೈ. ಆದರೆ, ಹೆಚ್ಚು ಪ್ರಚಾರ ಬಯಸದೆ ದಾನ ಮಾಡಿ ತಾನು ದಾನ ನೀಡಿದ ಕಾರ್ಯಗಳು ಅಥವಾ ಕಟ್ಟಡಗಳು ವ್ಯವಸ್ಥಿತವಾಗಿ ರೂಪುಗೊಂಡು ನಡೆಸುವಂತೆ ಮಾರ್ಗದರ್ಶನ ನೀಡುತ್ತಿದ್ದರು.
ಆದರ್ಶ ಜೀವನವನ್ನು ನಡೆಸಿದ ಶೆಟ್ಟಿಯವರ ಜೀವನ ಇತರರಿಗೆ ಮಾದರಿ ಆಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಮುರುಡೇಶ್ವರ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದರು.
ಓದಿ :ಲಾಕ್ಡೌನ್ನಲ್ಲಿ ವಿದೇಶಿಗರು ಲಾಕ್.. ಕೃಷಿ ಮಾಡುತ್ತಾ ಜೀವನ ನಡೆಸುತ್ತಿರುವ ಲವ್ ಬರ್ಡ್ಸ್