ಉಪ್ಪಿನಂಗಡಿ(ದಕ್ಷಿಣ ಕನ್ನಡ): ಕೊಕ್ಕಡ, ಶಿಶಿಲ ಗ್ರಾಮದ ಉಮ್ಮಂತಿಮಾರು, ಶಿರಾಡಿ ಸಮೀಪದ ಅಡ್ಡಹೊಳೆ ಪ್ರದೇಶದ ಪುಲ್ಲೋಟೆ ಪರಿಸರದಲ್ಲಿ ಎರಡು ದಿನಗಳಿಂದ ಒಂಟಿ ಸಲಗ ಪ್ರತ್ಯಕ್ಷವಾಗುತ್ತಿದೆ. ಉಮ್ಮಂತಿಮಾರು ನಿವಾಸಿ ಗಣೇಶ ಗೋಖಲೆಯವರ ತೋಟದಲ್ಲಿ ಅಡಕೆ ಕೊಯ್ಲು ಮಾಡುತ್ತಿದ್ದಾಗ ಆನೆ ಘೀಳಿಡುವ ಸದ್ದು ಕೇಳಿಸಿದೆ.
ಸದ್ದು ಕೇಳಿದ ಬೆನ್ನಲ್ಲೇ ಬಾಳೆ ಗಿಡಗಳು ಬಿದ್ದ ಸದ್ದಾಗಿದ್ದು, ತೋಟದಲ್ಲಿದ್ದ ಗಣೇಶ್ ಗೋಖಲೆ ಮತ್ತು ಮನೆಯವರು ಹಾಗೂ ಕೆಲಸಗಾರರು ಮರೆಯಲ್ಲಿ ನಿಂತು ನೋಡಿದಾಗ ಆನೆ ತೋಟದ ಮೂಲಕ ಹಾದು ಹೋಗಿದೆ. ನಿನ್ನೆ ಈ ಆನೆ ಶಿರಾಡಿ ಅಡ್ಡಹೊಳೆ ಭಾಗದಲ್ಲಿ ಇರುವ ಬಗ್ಗೆ ತಿಳಿದು ಬಂದಿದ್ದು, ಇಂದು ಗುಂಡ್ಯ, ಸುಬ್ರಹ್ಮಣ್ಯ ಅಥವಾ ನೆಲ್ಯಾಡಿ ಸಮೀಪದ ಪೆರಿಯಶಾಂತಿ ಕಾಡಿನಲ್ಲಿ ಬೀಡು ಬಿಟ್ಟಿರುವ ಸಾಧ್ಯತೆ ಇದೆ.
ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ, ಕಳೆದ ಸುಮಾರು ಹತ್ತು ವರ್ಷಗಳಿಂದ ಪ್ರತಿವರ್ಷವೂ ಧನುರ್ಮಾಸದಲ್ಲಿ ಈ ಪ್ರದೇಶಕ್ಕೆ ಕಾಡಾನೆ ಬರುತ್ತಿದೆ ಎನ್ನಲಾಗಿದೆ. ಕುದುರೆಮುಖ ಭಾಗದಿಂದ ಬರುವ ಕಾಡಾನೆ ಶಿಶಿಲ, ಶಿರಾಡಿ, ಸುಬ್ರಹ್ಮಣ್ಯ ಅಥವಾ ಪೆರಿಯಶಾಂತಿ ಮೂಲಕ ಸುಳ್ಯ ಮಡಿಕೇರಿಯ ಭಾಗಮಂಡಲವರೆಗೂ ಸಂಚರಿಸಿ ನಂತರ ಅದೇ ದಾರಿಯಲ್ಲಿ ವಾಪಸ್ ಕುದುರೆಮುಖ ಕಡೆಗೆ ಹೋಗುತ್ತದೆ ಎನ್ನಲಾಗಿದೆ.
ಆದರೆ ಕಳೆದ ಎರಡು ವರ್ಷಗಳಿಂದ ಆನೆ ಶಿಶಿಲ ಅಥವಾ ಶಿರಾಡಿ ಕಾಡಿನವರೆಗೆ ಬಂದು ವಾಪಸ್ ಹೋಗಿದ್ದು, 2012 ರಲ್ಲಿ ಕಡಬ ತಾಲೂಕಿನ ಕೋಡಿಂಬಾಳದ ನಾಕೂರು ಎಂಬಲ್ಲಿ ವ್ಯಕ್ತಿಯೋರ್ವರನ್ನು ನದಿಗೆ ಎಸೆದು ಮತ್ತು ದನವೊಂದನ್ನು ಕೊಂದದ್ದು ಬಿಟ್ಟರೆ ಈ ಆನೆ ಜನರ ಮೇಲೆ ಆಕ್ರಮಣ ಮಾಡಿದ ಬಗ್ಗೆ ವರದಿಗಳಿಲ್ಲ.
ಪ್ರತಿ ವರ್ಷ ಬೇಟಿ ನೀಡುವ ಕಾಡಾನೆ: ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್, ಪ್ರತಿ ವರ್ಷ ಬರುವ ಕಾಡಾನೆ ಈ ವರ್ಷವೂ ನಮ್ಮ ಅರಣ್ಯ ಪ್ರದೇಶಕ್ಕೆ ಬಂದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆನೆಗೆ ಯಾರೂ ತೊಂದರೆ ನೀಡಬೇಡಿ. ಅದು ಅದರ ಪಾಡಿಗೆ ಅದೇ ಕಾಡಿಗೆ ಹೋಗುತ್ತದೆ ಎಂದು ಮನವಿ ಮಾಡಿದರು.
ಈಗಾಗಲೇ ಮಂಗಳೂರು ಸೆಕ್ಷನ್‌ನ ಬೆಳ್ತಂಗಡಿ, ಉಪ್ಪಿನಂಗಡಿ, ಸುಬ್ರಹ್ಮಣ್ಯ ವಲಯ ಅರಣ್ಯ ಪ್ರದೇಶದ ಜನವಸತಿ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ವಾಪಾಸ್ ಕಾಡಿಗೆ ಓಡಿಸುವ ಕಾರ್ಯಾಚರಣೆಗೆ ಸಹಕರಿಸಲು ನುರಿತ ಆನೆ ಕಾವಾಡಿಗರ ತಂಡವನ್ನು ಕೂಡಲೇ ಕಳುಹಿಸುವಂತೆ ನಾಗರಹೊಳೆ ಪ್ರಾದೇಶಿಕ ಹುಲಿ ಸಂರಕ್ಷಿತ ನಿರ್ದೇಶಕರಿಗೆ ಮನವಿ ಮಾಡಲಾಗಿದೆ.
ಆನೆ ಓಡಿಸುವ ಪ್ರಯತ್ನ ಮಾಡಬೇಡಿ: ಅಲ್ಲಿಂದ ಇಟಿಎಫ್ ತಂಡವು ಎರಡು ದಿನಗಳಲ್ಲಿ ಇಲ್ಲಿಗೆ ಬರುವ ನಿರೀಕ್ಷೆ ಇದ್ದು, ನಂತರ ಕಾರ್ಯಾಚರಣೆ ಆರಂಭಿಸಲಾಗುತ್ತದೆ. ಆನೆ ಬಂತೆಂದು ಯಾರೂ ಅದಕ್ಕೆ ಕಲ್ಲು ಬಿಸಾಡುವ ಅಥವಾ ತೊಂದರೆ ಕೊಡುವ ಕೆಲಸ ಮಾಡಬಾರದು. ಈಗಾಗಲೇ ವಿಡಿಯೋದಲ್ಲಿ ಕಾಣುವಂತೆ ಆನೆಯ ವಿಡಿಯೊ ಮಾಡಲು, ಬೊಬ್ಬೆ ಹೊಡೆದು ಅದನ್ನು ಮುಂದಕ್ಕೆ ಓಡಿಸುವಂತಹ ಹುಚ್ಚು ಕೆಲಸಕ್ಕೆ ಮುಂದಾಗಬಾರದು. ಆ ರೀತಿ ಮಾಡಿದ್ದಲ್ಲಿ ಬೆದರುವ ಆನೆ ಎದುರು ಸಿಕ್ಕವವರ ಮೇಲೆ, ವಾಹನಗಳ ಮೇಲೆ, ಜಾನುವಾರುಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಆನೆ ಕಂಡುಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ತೊಗರಿಗೆ ನೆಟೆರೋಗ ಬಾಧೆ: ಬೆಳೆಹಾನಿ ಪರಿಹಾರಕ್ಕೆ ರೈತರ ಆಗ್ರಹ