ಮಂಗಳೂರು: ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಯನ್ನು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಅಜಾಗರೂಕತೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಆಡಿಯೋ ವೈರಲ್ ಆಗಿ ಜನರಲ್ಲಿ ಭೀತಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ದ.ಕ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ವಿಷಯದಲ್ಲಿ ಸುಳ್ಳು ವದಂತಿ ಹರಡಿರುವ ಬಗ್ಗೆ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ ಮಾತನಾಡಿ, ವೆನ್ಲಾಕ್ ಆಸ್ಪತ್ರೆಯ ಬಗ್ಗೆ ಸುಳ್ಳು ಕಟ್ಟುಕತೆಗಳನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರೋದನ್ನು ಯಾರೂ ನಂಬಬೇಡಿ. ಇದು ನಮ್ಮ ಸಿಬ್ಬಂದಿಯ ಮಾನಸಿಕ ಧೈರ್ಯವನ್ನು ಕುಗ್ಗಿಸಲು ಹಾಗೂ ಆಸ್ಪತ್ರೆಯ ಪ್ರತಿಷ್ಠೆಯನ್ನು ಕೆಡಿಸಲು ಮಾಡಿರುವ ಕುತಂತ್ರವಾಗಿದೆ. ವೆನ್ಲಾಕ್ ಆಸ್ಪತ್ರೆ ಇಡೀ ರಾಜ್ಯದಲ್ಲೇ ಮಾದರಿಯಾಗಿರುವ ಆಸ್ಪತ್ರೆ. ಇಂತಹ ಶಂಕೆಗಳಿಗೆ ಎಲ್ಲೂ ಆಸ್ಪದ ಇರೋದಿಲ್ಲ. ಎಲ್ಲಾ ಇಲಾಖೆ ನಮ್ಮೊಂದಿಗಿವೆ. ಅವರು ಯಾವ ರೀತಿಯಲ್ಲಿ ಸೂಚನೆ ನೀಡುತ್ತಾರೋ ಅದೇ ರೀತಿಯಲ್ಲಿ ನಾವು ಚಿಕಿತ್ಸೆ ನೀಡುತ್ತಿದ್ದೇವೆ. ಅದಕ್ಕೆ ಸಕಲ ಸಿದ್ಧತೆಗಳೊಂದಿಗೆ ನಾವು ಸನ್ನದ್ಧರಾಗಿದ್ದೇವೆ ಎಂದು ಹೇಳಿದರು.
ಕೋವಿಡ್-19 ಸೋಂಕಿತ ಹಾಗೂ ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದೇವೆ. ಆಯುಷ್ ಮೊದಲನೇ ಬ್ಲಾಕ್ನಲ್ಲಿ ಸ್ಕ್ರೀನಿಂಗ್, ಟ್ರಯಡಿ ಹಾಗೂ ಕೌನ್ಸೆಲಿಂಗ್ ವ್ಯವಸ್ಥೆ ಮಾಡಿದ್ದೇವೆ ಎಂದು ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಹೇಳಿದರು.
ಶೀತ, ಜ್ವರ, ಕೆಮ್ಮು ಹಾಗೂ ಗಂಟಲು ನೋವಿನಿಂದ ಬಾಧಿತರಾದವರಿಗೆ ನಮ್ಮ ವೈದ್ಯರು ತಪಾಸಣೆ ಮಾಡುತ್ತಾರೆ. ಅವರಿಗೆ ಕೋವಿಡ್ - 19 ಕಾಯಿಲೆ ಇದೆ ಎಂಬ ಶಂಕೆ ವ್ಯಕ್ತವಾಗಿದ್ದರೆ, ಇಲ್ಲಿರುವ ಪ್ರತ್ಯೇಕ 20 ವಿಶೇಷ ನಿಗಾ ಘಟಕದಲ್ಲಿ ದಾಖಲಿಸಲಾಗುತ್ತದೆ. ಮೊದಲಿಗೆ ಅವರ ಗಂಟಲು ದ್ರವವನ್ನು ಲ್ಯಾಬ್ಗೆ ಕಳುಹಿಸಿ ಕೊಡಲಾಗುತ್ತದೆ. ಈಗ ಹಾಸನ ಹಾಗೂ ಶಿವಮೊಗ್ಗಕ್ಕೆ ಕಳುಹಿಸಿಕೊಡಲಾಗುತ್ತದೆ. ಆದರೆ ಇನ್ನು ಮುಂದೆ ನಮ್ಮ ಆಸ್ಪತ್ರೆಯಲ್ಲಿಯೇ ಕೋವಿಡ್-19 ಪರೀಕ್ಷೆಗೆ ಲ್ಯಾಬ್ ನಿರ್ಮಿಸಲಾಗುತ್ತದೆ. ಲ್ಯಾಬ್ ಪರೀಕ್ಷೆಯಲ್ಲಿ ಕೋವಿಡ್ -19 ನೆಗೆಟಿವ್ ಕಂಡು ಬಂದಲ್ಲಿ ಅವರನ್ನು ಸೂಕ್ತ ಸಲಹೆಯ ಮೇರೆಗೆ ಹೋಮ್ ಕ್ವಾರಂಟೈನ್ಗೆ ಕಳುಹಿಸಲಾಗುತ್ತದೆ. ಪಾಸಿಟಿವ್ ಕಂಡು ಬಂದಲ್ಲಿ ಸಾಮಾನ್ಯ, ಮಧ್ಯಮ, ತೀವ್ರ ಎಂಬ ವಿಭಾಗ ಮಾಡಿ ಚಿಕಿತ್ಸೆ ನೀಡಲಾಗುವುದು. ಸಾಮಾನ್ಯ ವಿಭಾಗದವರನ್ನು ಮತ್ತೆ 14 ದಿನಗಳ ಕಾಲ ನಮ್ಮ ಆಸ್ಪತ್ರೆಯಲ್ಲಿರಿಸಿ ಅವರನ್ನು ಡಿಸ್ಚಾರ್ಜ್ ಮಾಡುವಾಗ ಅವರ ಸ್ವ್ಯಾಬ್ ಪರೀಕ್ಷೆ ಮಾಡಿ ಎರಡು ಬಾರಿ ನೆಗೆಟಿವ್ ಬಂದು ಅವರ ಎಕ್ಸರೆಯಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಬಂದಲ್ಲಿ ಮಾತ್ರ ಮನೆಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.
ಮಧ್ಯಮ ವಿಭಾಗದವರಿಗೆ 250 ಬೆಡ್ ಇರುವ ಆಸ್ಪತ್ರೆಯನ್ನು ಕೋವಿಡ್-19 ಇರುವ ರೋಗಿಗಳಿಗೆ ಮೀಸಲಾಗಿರಿಸಿದೆ. ಅದಕ್ಕೆ ಬೇಕಾಗಿವ ಎಲ್ಲಾ ವೈದ್ಯಕೀಯ ಸಲಕರಣೆಗಳು ನಮ್ಮಲ್ಲಿ ತಯಾರಾಗಿ ಇಡಲಾಗಿದೆ. ಹಾಗೆಯೇ ನಮ್ಮ ಇಲಾಖೆ ನೀಡುವ ಎಲ್ಲಾ ಸಲಹೆಗಳನ್ನು ಅನುಸರಿಸಲಾಗುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಆತಂಕಗಳನ್ನು ತೊರೆದು ಎಲ್ಲಾ ರೀತಿಯ ಚಿಕಿತ್ಸೆಗಳನ್ನು ನೀಡಲು ಸಜ್ಜಾಗಿದ್ದೇವೆ ಎಂದು ಡಾ. ರಾಜೇಶ್ವರಿ ದೇವಿ ಹೇಳಿದರು.