ಮಂಗಳೂರು: ನಗರದ ಖಾಸಗಿ ಆಸ್ಪತ್ರೆ ಇಂಡಿಯಾನದಲ್ಲಿ ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ದೂರಿನ ಹಿನ್ನೆಲೆಯಲ್ಲಿ ದಕ್ಷಿಣ ಜಿಲ್ಲಾಡಳಿತ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿತು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್ , ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ ರತ್ನಾಕರ್ ಅವರು ಇಂಡಿಯಾನ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಮತ್ತು ಅಲ್ಲಿ ಮಾಡಲಾಗುತ್ತಿರುವ ಬಿಲ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಇಂಡಿಯಾನ ಆಸ್ಪತ್ರೆಯ ಮ್ಯಾನೇಜಿಂಗ್ ಡೈರಕ್ಟರ್ ಡಾ. ಯೂಸುಫ್ ಅಲಿ ಕುಂಬ್ಳೆ ಅವರು ಆಸ್ಪತ್ರೆಯಲ್ಲಿ ನಡೆಯುವ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಆಸ್ಪತ್ರೆಗೆ ಬೇರೆ ಚಿಕಿತ್ಸೆಗೆ ಬಂದ ರೋಗಿಗಳಿಗೆ ಕೊರೊನಾ ಬಂದಾಗ ಅವರಿಗೆ ಈ ಹಿಂದೆ ನೀಡಲಾದ ಚಿಕಿತ್ಸಾ ವೆಚ್ಚವನ್ನು ಸೇರಿಸಿ ಬಿಲ್ ನೀಡಲಾಗುತ್ತದೆ. ಆದರೆ, ಅದನ್ನು ಕೇವಲ ಕೊರೊನಾ ಚಿಕಿತ್ಸೆ ಬಿಲ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಲಾಗುತ್ತಿದ್ದು, ಈ ಬಗ್ಗೆ ಸರ್ಕಾರಕ್ಕೆ ದಾಖಲೆ ನೀಡುವುದಾಗಿ ತಿಳಿಸಿದ್ದಾರೆ.